ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಬೆಳಗಾವಿ: ಕಳಸಾ–ಬಂಡೂರಿ ನಾಲೆ ತಿರುವು ಯೋಜನೆ ವಿರೋಧಿಸಿ ನಗರದಲ್ಲಿ ಪರಿಸರವಾದಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ನೂರಾರು ಜನರು ಸಮಾವೇಶಗೊಂಡರು. ಅಲ್ಲಿಂದ ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
‘ನಮ್ಮ ನೀರು ನಮ್ಮ ಹಕ್ಕು. ಮಹದಾಯಿ ನದಿ ತಿರುವು ಯೋಜನೆ ನಮಗೆ ಬೇಡವೇ ಬೇಡ’ ಎಂದು ಘೋಷಣೆ ಕೂಗಿದರು.
‘ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯವು ಸಾಮಾನ್ಯ ಅರಣ್ಯವಲ್ಲ. ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ತಾಣ. ಹುಲಿ, ಕರಡಿ, ಇರತೆ ಮತ್ತಿತರ ವನ್ಯಜೀವಿಗಳಿಗೆ ಇದು ನೆಲೆಯಾಗಿದೆ. ಇದಕ್ಕೆ ಮಾರಕವಾಗಿರುವ ಕಳಸಾ–ಬಂಡೂರಿ ನಾಲೆ ತಿರುವು ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಪರಿಸರವಾದ ಸುರೇಶ ಹೆಬ್ಳಿಕರ್ ಮಾತನಾಡಿ, ‘ಪಶ್ಚಿಮಘಟ್ಟ ಪ್ರದೇಶ ದಕ್ಷಿಣ ಭಾರತಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅಲ್ಲಿರುವ ಅನೇಕ ಪ್ರಭೇದಗಳ ಮರಗಳು, ವನ್ಯಜೀವಿಗಳಿಂದ ನಮಗೆ ಅನುಕೂಲವಾಗಿದೆ. ಹೀಗಿರುವಾಗ ನಾಲೆ ತಿರುವು ಯೋಜನೆ ಅನುಷ್ಠಾನಗೊಳಿಸಿದರೆ ಪಶ್ಚಿಮಘಟ್ಟಕ್ಕೆ ಧಕ್ಕೆ ಬರಲಿದ್ದು, ಮಳೆ ಪ್ರಮಾಣವೂ ಕುಸಿಯಲಿದೆ. ಇದು ಕೃಷಿ ರಂಗಕ್ಕೆ ಪೆಟ್ಟು ಬೀಳಲಿದ್ದು, ನಾವೆಲ್ಲ ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರಲಿದೆ. ಹಾಗಾಗಿ ಈ ಯೋಜನೆ ಅನುಷ್ಠಾನಗೊಳಿಸುವುದು ಬೇಡ’ ಎಂದು ಒತ್ತಾಯಿಸಿದರು.
ಪರಿಸರವಾದ ದಿಲೀಪ ಕಾಮತ್, ‘ಮಲಪ್ರಭಾ ನದಿಗೆ ನಿರ್ಮಿಸಿರುವ ನವಿಲುತೀರ್ಥ ಜಲಾಶಯ ಕಳೆದ 40 ವರ್ಷಗಳಲ್ಲಿ ನಾಲ್ಕೇ ಬಾರಿ ತುಂಬಿದೆ. ಖಾನಾಪುರ ತಾಲ್ಲೂಕಿನಲ್ಲಿ ಅರಣ್ಯ ನಾಶಪಡಿಸಿದ ಕಾರಣ, ಮಳೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಪಶ್ಚಿಮಘಟ್ಟದಲ್ಲಿ ನದಿಗಳೆಲ್ಲ ಹುಟ್ಟುತ್ತವೆ. ಅಂಥ ಕಡೆಗಳಲ್ಲೆಲ್ಲ ಪರಿಸರಕ್ಕೆ ಮಾರಕವಾದ ಯೋಜನೆ ಅನುಷ್ಠಾನವಾದರೆ, ನದಿಗಳು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.
‘ಯಾವುದೇ ನದಿ ವರ್ಷವಿಡೀ ಹರಿಯಬೇಕು. ಆದರೆ, ಅರಣ್ಯ ನಾಶದಿಂದಾಗಿ ಮಳೆಗಾಲದಲ್ಲಷ್ಟೇ ಮಲಪ್ರಭೆ ಹರಿಯುತ್ತಿದೆ. ಭವಿಷ್ಯದಲ್ಲಿ ನದಿ ಉಳಿಯಬೇಕು. ಮುಂದಿನ ಪೀಳಿಗೆಗೆ ನೀರು ಸಿಗಬೇಕಾದರೆ ಈ ಯೋಜನೆ ಅನುಷ್ಠಾನಗೊಳಿಸಲೇಬಾರದು’ ಎಂದು ಆಗ್ರಹಿಸಿದರು.
‘ನಾವು ಪರಿಸರಕ್ಕಾಗಿ ಹೋರಾಡುತ್ತಿದ್ದೇವೆಯೇ ಹೊರತು, ಗೋವಾ ಸರ್ಕಾರದ ಏಜೆಂಟರಾಗಿ ಅಲ್ಲ’ ಎಂದು ಒತ್ತಿ ಹೇಳಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಪರಿಸರ ಉಳಿಯಬೇಕೆಂಬ ಒಂದೇ ಕಾರಣಕ್ಕೆ ಈ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ’ ಎಂದರು.
ಇದೇವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಆಸಿಫ್ ಸೇಠ್ ಅವರೂ, ಪರಿಸರವಾದಿಗಳ ಬೇಡಿಕೆ ಆಲಿಸಿದರು. ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ಕೊಟ್ಟರು.
ಪರಿಸರವಾದಿಗಳಾದ ಶಿವಾಜಿ ಕಾಗಣಿಕರ, ರಿಧಿಮಾ ಪಾಂಡೆ, ಲಿಂಗರಾಜ ಜಗಜಂಪಿ, ನಾಗೇಂದ್ರ ಪ್ರಭು, ನಿತಿನ ಬಿ., ಸುಜಿತ ಮುಳಗುಂದ, ನೀತಾ ಪೋತದಾರ, ರವೀಂದ್ರ ಬೆಲ್ಲದ, ಪ್ರೇಮ್ ಚೌಗುಲಾ, ಕ್ಯಾಪ್ಟನ್ ನಿತಿನ ಧೊಂಡ, ರಾಜೀವ ಟೋಪಣ್ಣವರ, ಆನಂದ ದೇಸಾಯಿ, ಗೀತಾ ಸಾಹು, ನ್ಯಾಯಾ ಕೋಹೆಲೊ, ಶಾರದಾ ಗೋಪಾಲ, ಸಂಜೀವ ಕುಲಕರ್ಣಿ, ಅಯುಬ್ ಜಕಾತಿ, ಲತೀಫ್‌ಖಾನ್ ಪಠಾಣ, ಪ್ರಶಾಂತ ಕಾಮತ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.