ಕಳಸಾ–ಬಂಡೂರಿ ಯೋಜನೆ
(ಸಂಗ್ರಹ ಚಿತ್ರ)
ನವದೆಹಲಿ: ಮಹದಾಯಿಯ ಬಂಡೂರಿ ನಾಲೆ ತಿರುವು ಯೋಜನೆಗೆ 71 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೋರಿರುವ ಕರ್ನಾಟಕ ಸರ್ಕಾರದ ಸ್ಪಷ್ಟನೆಗಳಿಂದ ಸಮಾಧಾನಗೊಳ್ಳದಿರುವ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಯೋಜನಾ ಸ್ಥಳದ ಪರಿಶೀಲನೆಗೆ ತೀರ್ಮಾನಿಸಿದೆ.
ಮಹದಾಯಿ ಯೋಜನೆಯಿಂದ ಅರಣ್ಯಕ್ಕೆ ಆಗುವ ಹಾನಿ ತಗ್ಗಿಸುವಿಕೆ, ವನ್ಯಜೀವಿ ಸಂರಕ್ಷಣಾ ಯೋಜನೆ ಹಾಗೂ ಪರಿಹಾರಾತ್ಮಕ ಅರಣ್ಯೀಕರಣಗಳ ಯೋಜನೆಗಳ ಮಾರ್ಪಾಡು ಮಾಡಿರುವ ರಾಜ್ಯದ ಅಧಿಕಾರಿಗಳನ್ನು ಉನ್ನತಾಧಿಕಾರ ಸಮಿತಿಯು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜನವರಿ 20ರಂದು ನಡೆದ ಸಮಿತಿಯ 83ನೇ ಸಭೆಯ ನಡಾವಳಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ವನ್ಯಜೀವಿ ಸಂರಕ್ಷಣಾ ಯೋಜನೆಗೆ ಅರಣ್ಯ ಇಲಾಖೆಯು ಈ ಹಿಂದೆ ₹33 ಕೋಟಿಗಳ ಯೋಜನೆ ರೂಪಿಸಿತ್ತು. ಇದನ್ನು ಕೇಂದ್ರದ ಗಮನಕ್ಕೆ ತಂದಿತ್ತು. ಈ ಯೋಜನೆಗೆ ವಾರ್ಷಿಕ ₹50 ಲಕ್ಷ ಮೀಸಲಿಡಲಾಗುತ್ತದೆ ಎಂದು ಬೆಳಗಾವಿ ಡಿಸಿಎಫ್ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸಮಿತಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಈ ಮೊತ್ತವನ್ನು ಏಕಾಏಕಿ ಭಾರಿ ಕಡಿತ ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದರು.
ಈ ಯೋಜನೆಯ ನೀರನ್ನು ಮಳೆಗಾಲದಲ್ಲಿ ಮಾತ್ರ ಬಳಕೆ ಮಾಡಲಾಗುವುದು ಹಾಗೂ ಬೇಸಿಗೆಯಲ್ಲಿ ಕಾಡು ಪ್ರಾಣಿಗಳ ಬಳಕೆಗೆ ಮೀಸಲಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸಭೆಗೆ ತಿಳಿಸಿದರು. ಭೀಮಗಢ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಿಂದ ಯೋಜನಾ ಸ್ಥಳ ಎಷ್ಟು ದೂರದಲ್ಲಿದೆ ಎಂದು ಸಮಿತಿಯು ಪ್ರಶ್ನಿಸಿತು. ನಾಲಾ ತಿರುವಿಗೆ ಬಳಕೆಯಾಗುವ ನೆರಸೆ ಗ್ರಾಮದ ಅರಣ್ಯವು ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ ಎಂಬ ಅಂಶವು ಕೇಂದ್ರ ಅರಣ್ಯ ಸಚಿವಾಲಯದ ಕರಡು ಅಧಿಸೂಚನೆಯಲ್ಲಿದೆ ಎಂದೂ ಸಮಿತಿ ತಿಳಿಸಿತು. ನೆರಸೆ ಗ್ರಾಮವು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಯೋಜನೆಯ ಬಗ್ಗೆ ಗೋವಾ ಎತ್ತಿರುವ ತಕರಾರುಗಳಿಗೆ ಸಮಜಾಯಿಷಿ ನೀಡುವಂತೆ ಸಮಿತಿಯು ಸೂಚಿಸಿತು. ‘ನಾಲಾ ತಿರುವು ಯೋಜನೆಯು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂಬುದು ಗೋವಾ ಆರೋಪ. ಆದರೆ, ಈ ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಎಲ್ಲ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ’ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದರು. ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ 17.5 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಪರಿಹಾರಾತ್ಮಕ ಅರಣ್ಯೀಕರಣಕ್ಕೆ 28.40 ಹೆಕ್ಟೇರ್ ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ತಿಳಿಸಿತ್ತು. ಆದರೆ, ಪರಿಷ್ಕೃತ ಪ್ರಸ್ತಾವದಲ್ಲಿ 26.30 ಹೆಕ್ಟೇರ್ ಮಾತ್ರ ಒದಗಿಸಲಾಗಿದೆ. ಇದು ಸರಿಯಲ್ಲ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.