ADVERTISEMENT

ಕಲಬುರ್ಗಿ ಹತ್ಯೆ: ತನಿಖೆ ಹೊಣೆ ಎಸ್‌ಐಟಿಗೆ

ಧಾರವಾಡ ಹೈಕೋರ್ಟ್‌ ಪೀಠದ ಮೇಲ್ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 20:23 IST
Last Updated 26 ಫೆಬ್ರುವರಿ 2019, 20:23 IST
ಡಾ.ಎಂ.ಎಂ.ಕಲಬುರ್ಗಿ (ಸಂಗ್ರಹ ಚಿತ್ರ)
ಡಾ.ಎಂ.ಎಂ.ಕಲಬುರ್ಗಿ (ಸಂಗ್ರಹ ಚಿತ್ರ)   

ನವದೆಹಲಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಒಪ್ಪಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ.

‘ಪತಿಯ ಹತ್ಯೆ ಪ್ರಕರಣದ ತನಿಖೆ ಪ್ರಗತಿ ಕಂಡಿಲ್ಲ’ ಎಂದು ದೂರಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ, ತನಿಖೆಯ ಮೇಲ್ವಿಚಾರಣೆಯನ್ನು ಧಾರವಾಡದ ಹೈಕೋರ್ಟ್ ಪೀಠಕ್ಕೆ ವಹಿಸಿ ಮಂಗಳವಾರ ಆದೇಶಿಸಿತು.

‘ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಹಾಗೂ ಗೋವಿಂದ್ ಪಾನ್ಸರೆ ಅವರ ಹತ್ಯೆಯ ಮಾದರಿಯಲ್ಲೇ ಡಾ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದ್ದು, ಒಂದೇ ಸಂಸ್ಥೆ ತನಿಖೆ ಕೈಗೆತ್ತಿಕೊಳ್ಳಲಿ. ಬಾಂಬೆ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿ’ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದರು.

ADVERTISEMENT

ಗೋವಾದಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಭಾಗಿಯಾದವರೇ ಈ ಪ್ರಕರಣಗಳಲ್ಲೂ ಭಾಗಿಯಾಗಿರಬಹುದು ಎಂಬ ಶಂಕೆ ಇದೆ ಎಂದು ಅವರು ವಿವರಿಸಿದರು.

ಆದರೆ, ಗೌರಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಕರ್ನಾಟಕದ ಎಸ್‌ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅವರೇ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸಲಿ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ದೇವದತ್ತ ಕಾಮತ್ ಈ ಸಂದರ್ಭ ಮನವಿ ಮಾಡಿಕೊಂಡರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿನೀತ್‌ ಸರನ್‌ ಅವರನ್ನು ಒಳಗೊಂಡ ಪೀಠ, 2015ರ ಆಗಸ್ಟ್‌ 30ರಂದು ಬೆಳಿಗ್ಗೆ ಧಾರವಾಡದಲ್ಲಿ ನಡೆದಿದ್ದ ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆಯ ಹೊಣೆಯನ್ನು ಹೈಕೋರ್ಟ್‌ನ ಧಾರವಾಡ ಪೀಠ ವಹಿಸಿಕೊಳ್ಳಲಿ ಎಂದು ಹೇಳಿತು.

ಧಾಬೋಲ್ಕರ್ ಹಾಗೂ ಪಾನ್ಸರೆ ಹತ್ಯೆ ಪ್ರಕರಣಗಳ ತನಿಖೆ ಹಾಗೂ ನಾಪತ್ತೆಯಾಗಿರುವ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸಾರಂಗ್ ಹಾಗೂ ವಿನಯ ಪವಾರ್ ಕುರಿತು ಮುಚ್ಚಿದ ಲಕೋಟೆಯಲ್ಲಿ 4 ವಾರಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐ ಹಾಗೂ ಮಹಾರಾಷ್ಟ್ರ ಎಸ್ಐಟಿಗಳಿಗೆ ನ್ಯಾಯಪೀಠ ಸೂಚಿಸಿತು.

‘ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷ ಕಳೆದರೂ ಕರ್ನಾಟಕದ ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ. ಹಾಗಾಗಿ, ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾಯಾಲಯಕ್ಕೆ ವಹಿಸಬೇಕು’ ಎಂದು ಉಮಾದೇವಿ ಅವರು 2017ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.