ADVERTISEMENT

ಪ್ರವಾಹ: ಕಲ್ಯಾಣ ಕರ್ನಾಟಕ ತತ್ತರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
<div class="paragraphs"><p>ಜೇವರ್ಗಿ ತಾಲ್ಲೂಕಿನ ಕೋಬಾಳ ಗ್ರಾಮದಲ್ಲಿ ಭಾನುವಾರ ಭೀಮಾ ನದಿಯ ಪ್ರವಾಹ ಬಂದಿದ್ದರಿಂದ ನೆರೆ ಸಂತ್ರಸ್ತರನ್ನು ತೆಪ್ಪದ ಮೂಲಕ ಭಾನುವಾರ ಕರೆತರಲಾಯಿತು</p></div>

ಜೇವರ್ಗಿ ತಾಲ್ಲೂಕಿನ ಕೋಬಾಳ ಗ್ರಾಮದಲ್ಲಿ ಭಾನುವಾರ ಭೀಮಾ ನದಿಯ ಪ್ರವಾಹ ಬಂದಿದ್ದರಿಂದ ನೆರೆ ಸಂತ್ರಸ್ತರನ್ನು ತೆಪ್ಪದ ಮೂಲಕ ಭಾನುವಾರ ಕರೆತರಲಾಯಿತು

   

ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಕಲಬುರಗಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕಲಬುರಗಿ ವ್ಯಾಪ್ತಿಯಲ್ಲಿ ಭೀಮಾ ಹಾಗೂ ಬೀದರ್‌ ವ್ಯಾಪ್ತಿಯಲ್ಲಿ ಮಾಂಜ್ರಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳನ್ನು
ದ್ವೀಪವನ್ನಾಗಿಸಿದೆ.

ADVERTISEMENT

ಭಾನುವಾರ ಸಂಜೆ ವೇಳೆಗೆ ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ 6664, ಯಾದಗಿರಿ ಜಿಲ್ಲೆಯ 1350 ಜನ ಸೇರಿ 8020 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಕಲ್ಯಾಣ –ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುವ ಕಲಬುರಗಿ ಜಿಲ್ಲೆಯ ಜೇವರ್ಗಿ ಸಮೀಪದ ಕಟ್ಟಿ ಸಂಗಾವಿ ಹಾಗೂ ಖಾನಿ ಗ್ರಾಮಗಳ ಸಮೀಪದ ರಾಷ್ಟ್ರೀಯ ಹೆದ್ದಾರಿ–50ರಲ್ಲಿನ ಸೇತುವೆ ಮುಳುಗಿದ್ದು, ಎರಡನೇ ದಿನವೂ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಸಾರಿಗೆ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಇನ್ನೊಂದು ಮಾರ್ಗದಲ್ಲಿ ಸಂಚರಿಸಿದವು. ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ಸಿಗದೇ ರಸ್ತೆಯ ಪಕ್ಕದಲ್ಲಿ ಸಾಲುಗಟ್ಟಿವೆ. 

ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ಕೋನ ಹಿಪ್ಪರಗಾ, ಕೂಡಿ ದರ್ಗಾ, ಕಲಬುರಗಿ ತಾಲ್ಲೂಕಿನ ಸರಡಗಿ, ಫಿರೋಜಾಬಾದ್, ಹಾಗರಗುಂಡಗಿ, ಅಫಜಲಪುರದ ಹಲವು ಗ್ರಾಮಗಳು, ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮವು ಸಂಪೂರ್ಣ ಜಲಾವೃತವಾಗಿದೆ. ಎನ್‌ಡಿಆರ್‌ಎಫ್‌ ತಂಡವನ್ನು ವಾಡಿ ಸಮೀಪದಲ್ಲಿ ನಿಯೋಜಿಸಲಾಗಿದೆ.

ಭೀಮಾ ನದಿ ನೀರು ಸೇರಿ ಕೃಷ್ಣಾ ನದಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುರ್ಜಾಪುರ ಬ್ರಿಜ್‌ ಕಂ ಬ್ಯಾರೇಜ್‌ ಮುಳುಗಡೆಯಾಗಿದೆ. ಯಾದಗಿರಿ ಜಿಲ್ಲೆಯ ಸೈದಾಪುರ ಸೇರಿ ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಸಂಪ‌ರ್ಕ ಬಂದ್‌ ಆಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ನದಿ ಪಾತ್ರದ ರೋಜಾ ಎಸ್‌., ಶಿವನೂರ, ನಾಯ್ಕಲ್, ಮಾಚನೂರ ಗ್ರಾಮಗಳಿಂದ 445 ಕುಟುಂಬ ಸ್ಥಳಾಂತರಿಸಲಾಗಿದೆ.

ನರಾಷ್ಟ್ರೀಯ ಹೆದ್ದಾರಿ–150ರಲ್ಲಿ ಸೇತುವೆ ಮುಳುಗಿದೆ. ನಾಯ್ಕಲ್ ಸಮೀಪ ಯಾದಗಿರಿ– ಶಹಾಪುರ ರಸ್ತೆಯಲ್ಲಿ ನೀರು ನಿಂತಿದೆ. 12ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಭೀಮೆಯ ನೀರು ಯಾದಗಿರಿ ನಗರಕ್ಕೂ ವ್ಯಾಪಿಸಿದ್ದು
ವೀರಭದ್ರೇಶ್ವರ ನಗರ, ವಿಶ್ವಾರಾಧ್ಯ ನಗರ, ಜಿಲ್ಲಾ ಕ್ರೀಡಾಂಗಣದ ಹಿಂಬದಿ ಸೇರಿ ರೈಲು ಹಳಿವರೆಗೂ ಆವರಿಸಿಕೊಂಡಿದೆ. 

ಬೀದರ್‌ ಜಿಲ್ಲೆಯಲ್ಲಿ ಮಾಂಜ್ರಾ ನದಿ ಉಕ್ಕಿ ಹರಿದಿದ್ದು, ಹುಲಸೂರ ತಾಲ್ಲೂಕಿನ ಸಾಯಗಾಂವ್‌–ವಲಂಡಿ ರಸ್ತೆ ಜಲಾವೃತವಾಗಿದ್ದು, 20 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಕೊಂಗಳಿ ಗ್ರಾಮ ದ್ವೀಪವಾಗಿ ಬದಲಾಗಿದೆ. ತಾಲ್ಲೂಕಿನ ಶ್ರೀಮಾಳಿ–ಯಲ್ಲಮವಾಡಿ ಸಂಪರ್ಕ ಕೂಡ ಕಡಿತಗೊಂಡಿದೆ. 

ಕಮಲನಗರ ತಾಲ್ಲೂಕಿನ ಸಂಗಮ–ಠಾಣಾ ಕುಶನೂರ, ಸಂಗಮ–ಖೇಡ್ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಭಾಲ್ಕಿ ತಾಲ್ಲೂಕಿನ ದಾಡಗಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದ ರಿಂದ ಭಾಲ್ಕಿ–ಹುಮನಾಬಾದ್–ಬಸವಕಲ್ಯಾಣ ಮಾರ್ಗ ಬಂದ್ ಆಗಿದೆ.

ಇಬ್ಬರು ಸಾವು

ಕಲಬುರಗಿ: ಮಳೆ ಸಂಬಂಧಿ ಅವಘಡಗಳಿಂದಾಗಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು
ಮೃತಪಟ್ಟಿದ್ದಾರೆ. 

ಕಲಬುರಗಿ ಜಿಲ್ಲೆಯ ಕುಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೃಪತುಂಗ ಕಾಲೊನಿಯ ಬುಳ್ಳಾ ಬಡಾವಣೆಯಲ್ಲಿ ಪ್ರವಾಹಕ್ಕೆ ಸಿಲುಕಿ ಭೀಮಬಾಯಿ ದತ್ತಪ್ಪ ಭಜಂತ್ರಿ (45) ಎಂಬುವವರು ಮೃತಪಟ್ಟಿದ್ದಾರೆ. ಭೀಮಬಾಯಿ ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದವರು. 

ಜಿಟಿಜಿಟಿ ಮಳೆಯಿಂದಾಗಿ ಶನಿವಾರ ರಾಯಚೂರು ನಗರದ ಗಂಜ್ ವೃತ್ತದ ಬಳಿಯ ಹಳೆ ಮನೆಯ ಚಾವಣಿ ಕುಸಿದು ಈಶಮ್ಮ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಇಬ್ಬರ ರಕ್ಷಣೆ ಮಾಡಿದ್ದಾರೆ.

ಕರಾವಳಿ, ಕೊಡಗಿನಲ್ಲೂ ಮಳೆ 


ಕಾರವಾರ/ಬಾಗಲಕೋಟೆ: ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ವ್ಯಾಪಕ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಭಾನುವಾರ ನಸುಕಿನಲ್ಲಿ ಕಾರವಾರ, ಭಟ್ಕಳ, ಹೊನ್ನಾವರ ಸೇರಿ ಹಲವೆಡೆ ಮಳೆ ಆಗಿದೆ. ಅರಬ್ಬಿ ಸಮುದ್ರದಲ್ಲಿ ವೇಗದ ಗಾಳಿ ಬೀಸುತ್ತಿದ್ದ ಪರಿಣಾಮ ಹಲವು ಮೀನುಗಾರಿಕೆ ದೋಣಿಗಳು ಬಂದರಿಗೆ ಮರಳಿದವು.

ಘಟಪ್ರಭಾ ನದಿ ಹರಿವಿನಲ್ಲಿ ಹೆಚ್ಚಳವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಡವಳೇಶ್ವರ, ಮಿರ್ಜಿ, ಚನ್ನಾಳ, ಉತ್ತೂರು–ಜ್ಯಾಲಿಬೇರ, ಮುಧೋಳ, ಜೀರಗಾಳ ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಡಿಕೇರಿಯಲ್ಲಿ ಬಿರುಸು: ಭಾನುವಾರ ಮಡಿಕೇರಿ ನಗರದಲ್ಲಿ ಬಿರುಸಿನ ಮಳೆಯಾಗಿದೆ. ಮಳೆ, ಶೀತ ಗಾಳಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಸಂಪಾಜೆ ಮತ್ತು ಶಾಂತಳ್ಳಿಯಲ್ಲಿ ತಲಾ 5.8 ಸೆಂ.ಮೀ ಮಳೆಯಾಗಿದೆ. ಶ್ರೀಮಂಗಲ, ಭಾಗಮಂಡಲ, ಪೊನ್ನಂಪೇಟೆಯಲ್ಲಿ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.