ಶಿವರಾಜ್ ತಂಗಡಗಿ
ಬೆಂಗಳೂರು: ‘ಕನ್ನಡದ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿರುವ ನಟ ಕಮಲ್ ಹಾಸನ್ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಇಲ್ಲದ್ದಿದ್ದರೆ ಅವರ ಚಿತ್ರಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರುವಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಹಗುರವಾಗಿ ಎಷ್ಟೇ ದೊಡ್ಡ ವ್ಯಕ್ತಿ ಮಾತನಾಡಿದರೂ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದರು. ‘ಕನ್ನಡದ ಹಲವು ಚಿತ್ರಗಳಲ್ಲಿ ಕಮಲ್ ಹಾಸನ್ ಅವರು ನಟಿಸಿದ್ದಾರೆ. ಒಬ್ಬ ಹಿರಿಯ ನಟ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಹೇಳಿದರು.
‘ನಟಿಸಲು ಮತ್ತು ಹಣ ಸಂಪಾದಿಸಲು ನಮ್ಮ ಭಾಷೆ ಬೇಕು. ಇದೀಗ ಪುಕ್ಕಟೆ ಪ್ರಚಾರಕ್ಕೆ ಈ ರೀತಿ ಮಾತನಾಡುವುದೇ? ಈ ಹಿಂದೆ ಸೋನು ನಿಗಮ್ ಅವರು ಇದೇ ರೀತಿ ಕನ್ನಡಿಗರ ಬಗ್ಗೆ ಮಾತನಾಡಿ, ಬಳಿಕ ಎಚ್ಚೆತ್ತು ಕ್ಷಮೆಯಾಚಿಸಿದ್ದಾರೆ. ಇಂಥವರಿಗೆ ಪಾಠ ಕಲಿಸುವ ಅಗತ್ಯವಿದೆ’ ಎಂದರು.
‘ಅಲ್ಲಿಯೇ ಇದ್ದ ನಟ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿಲ್ಲ’ ಎಂದು ಗಮನಸೆಳೆದಾಗ ಪ್ರತಿಕ್ರಿಯಿಸಿದ ತಂಗಡಗಿ, ‘ಕನ್ನಡಕ್ಕಾಗಿ ರಾಜ್ ಕುಮಾರ್ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಕೂಡ ಅವರ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ. ಹೀಗಾಗಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಶಿವರಾಜ್ ಕುಮಾರ್ ಖಂಡಿಸಬೇಕು’ ಎಂದು ಆಗ್ರಹಿಸಿದರು.
ಕನ್ನಡ ಭಾಷೆಗೆ ಬಹಳ ದೀರ್ಘ ಇತಿಹಾಸವಿದೆ. ಆದರೆ ಅವರಿಗೆ (ಕಮಲ್ ಹಾಸನ್) ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಕಮಲ್‌ಹಾಸನ್ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ನೀಡಿದ ಹೇಳಿಕೆಯು ಕನ್ನಡಿಗರಿಗೆ ನೋವನ್ನುಂಟು ಮಾಡಿದೆ. ಅವರು ಕೂಡಲೇ ಕನ್ನಡಿಗರ ಬಳಿ ಕ್ಷಮೆಯಾಚಿಸುವ ಜತೆಗೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ ಆಗ್ರಹಿಸಿದ್ದಾರೆ.
‘ಕನ್ನಡ ಭಾಷೆ ತಮಿಳಿನಿಂದ ಹುಟ್ಟಿತು’ ಎಂಬ ಕಮಲ್ ಹಾಸನ್ ಅವರ ಹೇಳಿಕೆ ಖಂಡಿಸಿರುವ ಅವರು ‘ಅವರು ಪ್ರಬುದ್ಧ ನಟರು ಮತ್ತು ಚಿಂತಕರು ಎನ್ನುವ ಭಾವನೆ ಕನ್ನಡಿಗರಲ್ಲಿತ್ತು. ಆದರೆ ಅವರು ಬಾಲಿಶವಾದ ಹೇಳಿಕೆ ನೀಡುವ ಮೂಲಕ ಎಲ್ಲರ ಹಾಸ್ಯಕ್ಕೆ ಒಳಗಾಗಿದ್ದಾರೆ. ಕನ್ನಡ ಭಾಷೆಗೆ ತನ್ನದೇ ಆದ ಸುದೀರ್ಘವಾದ ಇತಿಹಾಸವಿದೆ. ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿತು ಎಂಬ ಭ್ರಮೆಯ ಹೇಳಿಕೆ ಕನ್ನಡಿಗರಿಗೆ ಅವರು ಮಾಡಿರುವ ಅಪಮಾನ’ ಎಂದು ಹೇಳಿದ್ದಾರೆ.
‘ಕನ್ನಡ ಭಾಷೆಯ ಬಗ್ಗೆ ಕಮಲ ಹಾಸನ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ಭಾಷೆಯ ಬಗ್ಗೆ ಸಂಸ್ಕೃತಿ ಬಗ್ಗೆ ಮತ್ತು ಕನ್ನಡ ಪರಂಪರೆಯ ಬಗ್ಗೆ ಅವರಿಗೆ ಕಿಂಚಿತ್ತಾದರೂ ಜ್ಞಾನ ಇದ್ದಿದ್ದಲ್ಲಿ ಅಂತಹ ಹೇಳಿಕೆ ನೀಡುತ್ತಿರಲಿಲ್ಲ. ಇಂತಹ ಹೇಳಿಕೆಗಳಿಂದ ಕನ್ನಡಿಗರ ಮತ್ತು ತಮಿಳು ಬಾಂಧವರ ನಡುವೆ ಅನಗತ್ಯ ಸಂಘರ್ಷ ಉಂಟಾಗುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಅವರಿಗೆ ಇರಬೇಕಿತ್ತು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.