ADVERTISEMENT

ಒಂದೇ ಋತುವಿನಲ್ಲಿ 42 ಪದಕ

ದಾಖಲೆ ಉತ್ತಮ ಪಡಿಸಿಕೊಂಡ ಶ್ರೀನಿವಾಸ ಗೌಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 12:28 IST
Last Updated 2 ಮಾರ್ಚ್ 2020, 12:28 IST
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ   

ಉಪ್ಪಿನಂಗಡಿ: ಇಲ್ಲಿ ಭಾನುವಾರ ಮುಕ್ತಾಯಗೊಂಡ ವಿಜಯ–ವಿಕ್ರಮ ಜೋಡುಕರೆ ಕಂಬಳದಲ್ಲಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಓಟಗಾರಅಶ್ವತ್ಥಪುರ ಶ್ರೀನಿವಾಸ ಗೌಡ ಈ ಋತುವಿನಲ್ಲಿ 42 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದು, ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ನೇಗಿಲು ಹಿರಿಯ ವಿಭಾಗದಲ್ಲಿ ಮೂಡುಬಿದಿರೆ ನ್ಯೂ ಪಡಿವಾಳ್‌ ಹಾರ್ದಿಕ್ ಹರ್ಷವರ್ಧನ ಪಡಿವಾಳ್ ಕೋಣಗಳನ್ನು ಓಡಿಸಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಪ್ರಥಮ ಸ್ಥಾನ ಪಡೆದರು. ಹಗ್ಗಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಹಾಗೂ ಹಗ್ಗ ಕಿರಿಯದಲ್ಲಿ ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ್ದ ಶ್ರೀನಿವಾಸ ಗೌಡ ದ್ವಿತೀಯ ಸ್ಥಾನಗಳನ್ನು ಪಡೆದಿದ್ದು, ಒಟ್ಟು ಮೂರು ಪದಕಗಳನ್ನು ಪಡೆದರು. (ಹಗ್ಗದ ಹಿರಿಯ ಮತ್ತು ಕಿರಿಯ ಎರಡೂ ವಿಭಾಗಗಳಲ್ಲಿ ಕೊಳಕೆ ಇರ್ವತ್ತೂರು ಆನಂದ್ ಅವರು ಓಡಿಸಿದ ಕೋಣಗಳು ಪ್ರಥಮ ಸ್ಥಾನ ಪಡೆದವು)

ಈ ಋತುವಿನ 12ನೇ ಕಂಬಳ ವೇಣೂರಿನಲ್ಲಿ ಫೆಬ್ರುವರಿ 15 ಮತ್ತು 16ರಂದು ನಡೆದಿದ್ದು, ಅಲ್ಲಿ ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ಶ್ರೀನಿವಾಸ ಗೌಡ ಒಂದೇ ಋತುವಿನಲ್ಲಿ 35 ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದರು. ಅನಂತರ ಮಂಜೇಶ್ವರದ ಪೈವಳಿಕೆಯಲ್ಲಿ ನಡೆದ 13ನೇ ಕಂಬಳದಲ್ಲಿ ನಾಲ್ಕು ಪದಕ ಪಡೆದಿದ್ದರು. ಇದಕ್ಕೂ ಮೊದಲು ಒಂದೇ ಋತುವಿನ 18 ಕಂಬಳಗಳಲ್ಲಿ 32 ಪದಕಗಳನ್ನು ಗೆದ್ದ ವರ್ಕಾಡಿಗೋಳಿ ಹಕ್ಕೇರಿ ಸುರೇಶ್‌ ಶೆಟ್ಟಿ ಹೆಸರಿನಲ್ಲಿ ಈ ದಾಖಲೆ ಇತ್ತು. ಈ ಋತುವಿನ ಅಂತಿಮ ಕಂಬಳವು ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿಯಲ್ಲಿ ಮಾ.7ರಂದು ನಡೆಯಲಿದೆ.

ADVERTISEMENT

ಆದರೆ, ಉಪ್ಪಿನಂಗಡಿ ಕಂಬಳದ ಬಹುನಿರೀಕ್ಷಿತ ಹಗ್ಗ ಕಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ್ದು, ಸಮಬಲದಲ್ಲಿದ್ದ ಮತ್ತೊಂದು ದಾಖಲೆಯನ್ನು ಮುರಿಯುವ ಅವಕಾಶದಿಂದ ವಂಚಿತರಾದರು. ಈ ವಿಭಾಗದಲ್ಲಿ ನಿರಂತರ 13 ಚಿನ್ನ ಗೆದ್ದ ದಾಖಲೆಯು ಬೆಳವಾಯಿ ಸದಾನಂದ ಶೆಟ್ಟಿ ಅವರ ಕೋಣವನ್ನು ಓಡಿಸಿದ್ದ ನಕ್ರೆ ಜಯಕರ ಮಡಿವಾಳರ ಹಾಗೂಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ್ದ ಶ್ರೀನಿವಾಸ ಗೌಡರ ಜಂಟಿ ಹೆಸರಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.