ADVERTISEMENT

ಖಾಸಗಿ ಶಾಲಾ ಸಮಸ್ಯೆ ಇತ್ಯರ್ಥಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಕ್ಯಾಮ್ಸ್‌‘ ಮನವಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 20:16 IST
Last Updated 5 ಜೂನ್ 2023, 20:16 IST
   

ಬೆಂಗಳೂರು: ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ‍ಪಠ್ಯ ಬೋಧನೆಯಲ್ಲಿನ ತಾರತಮ್ಯ ಹೋಗಲಾಡಿಸುವುದೂ ಸೇರಿದಂತೆ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೋರಿ ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಎಎಂಎಸ್) ಮುಖಂಡರು ಸೋಮವಾರ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಶಿಕ್ಷಣ ಇಲಾಖೆ ರೂಪಿಸಿದ ಹೊಸ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಅಗ್ನಿ, ಕಟ್ಟಡ ಸುರಕ್ಷತೆ ಪ್ರಮಾಣಪತ್ರದ ನೆಪದಲ್ಲಿ ತೊಂದರೆ ಕೊಡಲಾಗುತ್ತಿದೆ. 2018ಕ್ಕಿಂತ ಮೊದಲಿನ ಸಂಸ್ಥೆಗಳಿಗೆ ನಿರಾಕ್ಷೇಪಣೆ ಪತ್ರ ಕಡ್ಡಾಯಗೊಳಿಸಬಾರದು. ಶಿಕ್ಷಣ ಇಲಾಖೆಯ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯದ ತೀರ್ಪು ಪರಿಗಣಿಸಬೇಕು. ಶಾಲಾ ಕಟ್ಟಡ ಪರವಾನಗಿ ಸರಳಗೊಳಿಸಬೇಕು. ಹೆಚ್ಚುವರಿ ತರಗತಿ ಆರಂಭಿಸಿದ್ದಕ್ಕೆ ಅನಧಿಕೃತ ಎಂದು ಘೋಷಿಸಿರುವ 620 ಶಾಲೆಗಳನ್ನು ಸಕ್ರಮಗೊಳಿಸಬೇಕು ಎಂದು ಕೋರಿದರು.

ರಾಜ್ಯ ಹಾಗೂ ಎನ್‌ಸಿಇಆರ್‌ಟಿ ಮಾರ್ಗದರ್ಶನದಂತೆ ಪಠ್ಯ ಪರಿಷ್ಕರಿಸಬೇಕು. ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸುವ ಅನುಮತಿ ಪಡೆದು, ಸಿಬಿಎಸ್‌ಇ ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನುಮತಿ ಪಡೆಯದೇ ನಡೆಸುತ್ತಿರುವ ಶಾಲೆಗಳ ಪಟ್ಟಿ ಮಾಡಬೇಕು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮತ್ತಿತರರು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.