ADVERTISEMENT

ಕನೇರಿ ಸ್ವಾಮೀಜಿ ಕ್ಷಮೆ ಕೇಳದಿದ್ದರೆ ಕರ್ನಾಟಕದಿಂದಲೇ ನಿಷೇಧ: ಲಿಂಗಾಯತ ಶ್ರೀಗಳು

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 14:36 IST
Last Updated 17 ಅಕ್ಟೋಬರ್ 2025, 14:36 IST
<div class="paragraphs"><p>ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ</p></div>

ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

   

ಬೆಂಗಳೂರು: ‘ಮಹಾರಾಷ್ಟ್ರದ ಕೊಲ್ಹಾಪುರ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಸ್ತ್ರೀಯರ ಕುರಿತಾಗಿ ನೀಡಿರುವ ಹೇಳಿಕೆಗೆ ನಾಡಿನ ಜನರ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಅವರನ್ನು ಕರ್ನಾಟಕದಿಂದಲೇ ನಿಷೇಧಿಸುವ ಸನ್ನಿವೇಶ ಎದುರಾಗಬಹುದು’ ಎಂದು ಕರ್ನಾಟಕ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಸಿದೆ.

‘ಬಸವ ಸಂಸ್ಕೃತಿ ಅಭಿಯಾನವನ್ನು ಟೀಕಿಸುವ ಭರದಲ್ಲಿ ಅವರು ಬಳಸಿರುವ ಅಶ್ಲೀಲ ಪದ ಬಳಕೆಯನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ತಾವೂ ಸಮಾವೇಶ ಆಯೋಜಿಸಿ ವಿಚಾರಗಳನ್ನು ಪ್ರಸ್ತಾಪಿಸಿದ್ದರೆ ಅದನ್ನು ಸ್ವಾಗತಿಸುತ್ತಿದ್ದೆವು. ಅದನ್ನು ಬಿಟ್ಟು ಲಘುವಾಗಿ ಮಾತನಾಡಿ ಇಡೀ ಸ್ವಾಮೀಜಿಗಳ ಸಮುದಾಯ, ಸಂಸ್ಕೃತಿಗೆ ಕಳಂಕ ತಂದಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ನಮ್ಮನ್ನು ಸಿದ್ದರಾಮಯ್ಯ ಕೃಪಾ ‍ಪೋಷಿತ ಮಂಡಳಿ ಎಂದು ಟೀಕಿಸಿದ್ದಾರೆ. ನಾವು ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ. ನಮ್ಮದು ಬಸವ ಪಕ್ಷ. ಬಸತ ತತ್ವದ ಘನತೆ ಉಳಿಸುವ ಪ್ರಯತ್ನ ಮಾಡಿದ್ದೇವೆ. ಅಭಿಯಾನವನ್ನು ನಮ್ಮ ಖರ್ಚಿನಲ್ಲೇ ನಡೆಸಿದ್ದೇವೆ. ಬಸವಣ್ಣನವರ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅಗ್ನಿ ಪರೀಕ್ಷೆ ಎದುರಿಸಿ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯ ಪ್ರದರ್ಶಿಸಿದ್ದರಿಂದ ಅವರನ್ನು ಅಭಿನಂದಿಸಿದ್ದೇವೆ. ಇದನ್ನೇ ಮುಂದಿಟ್ಟು ಹುಯಿಲೆಬ್ಬಿಸಲಾಗುತ್ತಿದೆ’ ಎಂದರು.

ಬೆಳಗಾವಿ ರಾಯಭಾಗ ತಾಲ್ಲೂಕು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ‘ಸ್ತ್ರೀಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸ್ವಾಮೀಜಿ ಅವರ ನಡವಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಬೇಕಿತ್ತು. ಅದನ್ನು ಬಿಟ್ಟು ವಿಜಯಪುರ ಜಿಲ್ಲೆಗೆ ನಿಷೇಧ ಮಾಡಿದ್ದನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೂ ತಾಯಂದರಿದ್ದಾರೆ ಎನ್ನುವುದನ್ನು ಮರೆಯಬಾರದು. ಸಿದ್ದೇಶ್ವರ ಸ್ವಾಮೀಜಿ ಅವರ ಶಿಷ್ಯರಾಗಿ ಕನೇರಿ ಮಠದ ಸ್ವಾಮೀಜಿ ಮಾತನಾಡಿದ್ದನ್ನು ಸಮಾಜ ಒಪ್ಪುವುದಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.