ADVERTISEMENT

‘ಪ್ರಾಧಿಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ’

ಪ್ರಾದೇಶಿಕ ಭಾಷೆಗಳ ಸಮಸ್ಯೆಗಳಿಗೆ ಪರಿಹಾರ...

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:33 IST
Last Updated 7 ಫೆಬ್ರುವರಿ 2019, 19:33 IST

ನವದೆಹಲಿ: ಕನ್ನಡ ಭಾಷೆ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರದ ಹಂಗಾಮಿ ಹಣಕಾಸು ಸಚಿವ ಪೀಯೂಷ್‌ ಗೊಯಲ್‌ ಮತ್ತು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿರುವ ಪ್ರಾಧಿಕಾರದ ನಿಯೋಗ, ಸಮಸ್ಯೆಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ನೇಮಕಾತಿ ಪದ್ಧತಿ ರದ್ದುಪಡಿಸಿ, ಹಿಂದೆ ಜಾರಿಯಲ್ಲಿದ್ದ ಪ್ರಾದೇಶಿಕ ನೇಮಕಾತಿ ಪದ್ಧತಿಯನ್ನೇ ಜಾರಿಗೊಳಿಸಬೇಕು ಎಂದು ಸಚಿವ ಪೀಯೂಷ್‌ ಗೊಯಲ್‌ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ವಿವರಿಸಿದರು.

ADVERTISEMENT

ಬ್ಯಾಂಕ್‌ ಹುದ್ದೆಗಳ ನೇಮಕಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸುವುದರಿಂದ ಪ್ರಾದೇಶಿಕ ಭಾಷೆಯನ್ನು ಮಾತ್ರ ಬಲ್ಲ ಅಭ್ಯರ್ಥಿಗಳು ನೇಮಕಗೊಳ್ಳುತ್ತಿಲ್ಲ. ಕೂಡಲೇ ಈ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಲಾಗಿದೆ ಎಂದರು.

ಆಯಾ ರಾಜ್ಯಗಳಲ್ಲಿ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾದೇಶಿಕ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಬೇಕು. ಆಯಾ ಭಾಷಾ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಮೈಸೂರಿನಲ್ಲಿರುವ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವು ಪರಿಣಾಮಕಾರಿ ಆಗಿ ಕಾರ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವು ಅನುಷ್ಠಾನಕ್ಕೆ ತಂದಿರುವ ವಿದ್ಯಾರ್ಥಿ ಕೇಂದ್ರಿತ ಬೋಧನಾ ಪದ್ಧತಿಯಿಂದಲೂ ಪ್ರಾದೇಶಿಕ ಭಾಷೆಗಳ ಅಭ್ಯುದಯಕ್ಕೆ ಸಮಸ್ಯೆಯಾಗಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರಾದೇಶಿಕ ಭಾಷಾ ಕಲಿಕೆಯಿಂದ ವಂಚಿತಗೊಳಿಸುತ್ತಿವೆ. ಈ ಪದ್ಧತಿಯಲ್ಲಿ ಕೂಡಲೇ ಬದಲಾವಣೆ ತರುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಸಾಹಿತಿಗಳಾದ ಸಿದ್ದಲಿಂಗಯ್ಯ, ಬಿ.ಟಿ. ಲಲಿತಾ ನಾಯಕ್, ಕಾಳೇಗೌಡ ನಾಗವಾರ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರುಳೀಧರ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.