ADVERTISEMENT

ಭಾಷೆ ಅಭಿವೃದ್ಧಿ: ₹10 ಸಾವಿರ ಕೋಟಿ ಮೀಸಲಿಡಿ -ಕನ್ನಡ ಅನುಷ್ಠಾನ ಮಂಡಳಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:03 IST
Last Updated 10 ಫೆಬ್ರುವರಿ 2023, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಮೀಸಲಿಡಬೇಕು ಎಂದು ಕನ್ನಡ ಅನುಷ್ಠಾನ ಮಂಡಳಿ (ಸರ್ಕಾರದಿಂದ ಮನ್ನಣೆ ಪಡೆದ ಸಂಸ್ಥೆ) ಆಗ್ರಹಿಸಿದೆ.

‘ಉನ್ನತ ವೃತ್ತಿ ಶಿಕ್ಷಣದಲ್ಲಿ ಕನ್ನಡದ ಉತ್ತೇಜನದ ಪಠ್ಯ ರಚನೆಗೆ ವಿಶೇಷ ಘಟಕ ಸ್ಥಾಪಿಸಲು ₹100 ಕೋಟಿ ಮೀಸಲಿಡಬೇಕು. ಖಾಸಗಿ ಮತ್ತು ಸರ್ಕಾರಿ ರಂಗದಲ್ಲಿ ಕನ್ನಡಿಗರ ಔದ್ಯೋಗಿಕ ನೆಲೆಗಟ್ಟನ್ನು ಗಟ್ಟಿಗೊಳಿಸಲು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕನ್ನಡ ಮನ್ನಣೆ ಕೋಶ ಪ್ರಾರಂಭಿಸಬೇಕು. ಕೆಪಿಎಸ್‌ಸಿ ಮೂಲಕ ಕನ್ನಡದಲ್ಲಿ 100 ಅಂಕಗಳ ಕಡ್ಡಾಯ ಪರೀಕ್ಷೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಶೇ 90ರಷ್ಟು ಹುದ್ದೆಗಳನ್ನು ಮೀಸಲಿಡಬೇಕು’ ಎಂದು ಮಂಡಳಿಯ ಅಧ್ಯಕ್ಷ ಆರ್. ಎ. ಪ್ರಸಾದ್ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಉತ್ತೇಜನ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ ನಿರುದ್ಯೋಗಿ ಅಭ್ಯರ್ಥಿ
ಗಳಿಗೆ ಮಾಸಿಕ ₹2 ಸಾವಿರ ಗೌರವಧನ ನೀಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿದ ರಾಜಕೀಯ ಹಿನ್ನಲೆ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.