ADVERTISEMENT

‘ಕೇರಳ ಕೇಂದ್ರೀಯ ವಿವಿ: ಕನ್ನಡ ವಿಭಾಗ ಉಳಿಸಿ’-ಟಿ.ಎಸ್.ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:17 IST
Last Updated 18 ಜನವರಿ 2022, 17:17 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

ಬೆಂಗಳೂರು: ‘ಕೇರಳದಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಉಳಿಸಲು ಕ್ರಮವಹಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಕೇಂದ್ರ ಸಚಿವರಾದ‍ಪ್ರಹ್ಲಾದ ಜೋಶಿ ಹಾಗೂಶೋಭಾ ಕರಂದ್ಲಾಜೆ ಅವರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ‘ಕಾಸರಗೋಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರೊಬ್ಬರ ನೆರವಿನಿಂದ 11 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ 2018ರಲ್ಲಿ ಕನ್ನ‌ಡ ವಿಭಾಗ ಪ್ರಾರಂಭಿಸಲಾಯಿತು. ಈ ವಿಭಾಗವು ಈಗ ತಾನೆ ಸಶಸಕ್ತವಾಗಿ ಬೆಳೆಯುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ವಿಭಾಗವನ್ನು ಮುಚ್ಚುವ ಬಗ್ಗೆ ಕ್ರಮವಹಿಸುತ್ತಿದೆ. ಇದರಿಂದಾಗಿ ಕನ್ನಡದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ’ ಎಂದು ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

‘ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಎನ್‌ಟಿಎ ಸಂಸ್ಥೆಯ ಪ್ರವೇಶ ಪರೀಕ್ಷೆಯ ಮೂಲಕ ಮಾಡಲಾಗುತ್ತಿದೆ. ಕನ್ನಡ ವಿಭಾಗಕ್ಕೂ ಪ್ರವೇಶ ಪರೀಕ್ಷೆ ನಡೆಸಬೇಕೆಂಬ ವಾದವನ್ನು ವಿಶ್ವವಿದ್ಯಾಲಯ ಮುಂದಿಡುತ್ತಿದೆ. ಸಾಮಾನ್ಯವಾಗಿ ಭಾಷೆಯಂತಹ ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಸೀಮಿತವಾಗಿರುತ್ತದೆ. ಕನ್ನಡ ಮಾತ್ರವಲ್ಲದೇ, ಹಿಂದಿ, ಉರ್ದು, ಮಲೆಯಾಳ ಸೇರಿದಂತೆ ಎಲ್ಲ ಭಾಷೆಗಳಿಗೆ ಈ ಪರಿಸ್ಥಿತಿ ಇದೆ.ಕಳೆದ ವರ್ಷ ನೇರ ಪ್ರವೇಶಾತಿ ಮೂಲಕವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಇದರಿಂದ 18 ವಿದ್ಯಾರ್ಥಿಗಳ ಪ್ರವೇಶಾತಿ ಸಾಧ್ಯವಾಗಿದೆ. ಈ ಬಾರಿಯೂ ನೇರ ಪ್ರವೇಶಾತಿ ಪಡೆಯಲು 10 ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಆರೋಗ್ಯ ಇಲಾಖೆ: ಆಂಗ್ಲ ಭಾಷೆಯಲ್ಲಿ ಆದೇಶ

‘ಆರೋಗ್ಯ ಇಲಾಖೆಯು ಕೋವಿಡ್‌ಗೆ ಸಂಬಂಧಿಸಿದ ಸುತ್ತೋಲೆ ಹಾಗೂ ಆದೇಶಗಳನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಟಿ.ಎಸ್. ನಾಗಾಭರಣ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ‘ಆಂಗ್ಲ ಭಾಷೆಯಲ್ಲಿ ಆದೇಶಗಳನ್ನು ಹೊರಡಿಸಿದಲ್ಲಿ ಗ್ರಾಮೀಣ ಭಾಗದ ಜನರಿಗೆ ಅರ್ಥವಾಗುವುದಿಲ್ಲ. ಈ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಸರ್ಕಾರಿ ಆಡಳಿತದಲ್ಲಿ ಕನ್ನಡ ಕಡೆಗಣನೆ ಸಲ್ಲದು. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ಜಾರಿಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.