ADVERTISEMENT

‘ಚೋರ್‌ ಗುರು ಚಾಂಡಾಲ್ ಶಿಷ್ಯ’ ಸಿನಿಮಾ ನಿರ್ದೇಶಕ ಎ.ಆರ್. ಬಾಬು ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 9:04 IST
Last Updated 4 ಡಿಸೆಂಬರ್ 2018, 9:04 IST
   

ಬೆಂಗಳೂರು:ನಟ ಮತ್ತು ನಿರ್ದೇಶಕ ಎ.ಆರ್‌. ಬಾಬು (56) ಮಂಗಳವಾರ ನಿಧನರಾದರು.

ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

1998ರಲ್ಲಿ ಚರಣ್‌ರಾಜ್, ಚಾರುಲತಾ, ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ ತೆರೆಕಂಡ ‘ಚೋರ್‌ ಗುರು ಚಾಂಡಾಲ್ ಶಿಷ್ಯ’ ಅವರ ನಿರ್ದೇಶನದ ಪ್ರಥಮ ಚಿತ್ರ. ‘ಹಲೋ... ಯಮ’, ‘ಕೂಲಿ ರಾಜ’, ‘ಖಳನಾಯಕ’, ‘ಜೀ... ಬೂಂಬಾ’, ‘ಆಗೋದೆಲ್ಲ... ಒಳ್ಳೆದಕ್ಕೆ..!’, ‘ಮರುಜನ್ಮ’, ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’, ‘ಸಪ್ನೊಂಕಿ ರಾಣಿ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಣ್ಣಹಚ್ಚುವ ಮೂಲಕ ತೆರೆಯ ಮೇಲೂ ಅವರು ಮಿಂಚಿದ್ದರು. ಸಂಗೀತ ನಿರ್ದೇಶಕ ಹಂಸಲೇಖ ಅವರ ನೆಚ್ಚಿನ ನಿರ್ದೇಶಕರಾಗಿದ್ದರು.

ADVERTISEMENT

‘ಇರಲಾರದೆ ಇರುವೆ ಬಿಡ್ಕೊಂಡ’ ಅವರ ನಿರ್ದೇಶನದ ಕೊನೆಯ ಚಿತ್ರ. ನೀತು ಮತ್ತು ಗುರು ಜಗ್ಗೇಶ್‌ ನಟಿಸಿರುವ ಈ ಚಿತ್ರ ಇನ್ನೂ ತೆರೆಕಂಡಿಲ್ಲ. ನಿರ್ದೇಶಕ ಪ್ರೇಮ್‌ ಅವರು ಪಳಗಿದ್ದು ಬಾಬು ಗರಡಿಯಲ್ಲಿಯೇ. ಆದರೆ, ‘ದಿ ವಿಲನ್‌’ ಚಿತ್ರದ ಟೀಸರ್‌ ಬಿಡುಗಡೆ ವೇಳೆ ಪ್ರೇಮ್‌ ವಿರುದ್ಧವೇ ಬಾಬು ತಿರುಗಿಬಿದ್ದಿದ್ದರು.

ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಪ್ರೇಮ್ ಅವರು, ‘ನಿರ್ದೇಶಕರೇ ಚಿತ್ರದ ಹೀರೊ. ಒಳ್ಳೆಯ ಚಿತ್ರಗಳನ್ನು ನೀಡಿದ ಹಲವು ಹಿರಿಯ ನಿರ್ದೇಶಕರು ನಿರ್ಗತಿಕರಾಗಿದ್ದಾರೆ. ಅವರಿಗೆ ಅಂದೇ ಸಮಾರಂಭದಲ್ಲಿ ಆರ್ಥಿಕ ನೆರವು ನೀಡಲಾಗುವುದು’ ಎಂದು ಘೋಷಿಸಿದ್ದರು. ಈ ಮಾತಿನಿಂದ ನೊಂದಿದ್ದ ಬಾಬು ‘ನಿರ್ಗತಿಕರು’ ಎಂಬ ಪದ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರೇಮ್‌ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಬಾಬು ನಿಧನಕ್ಕೆ ‘ನವರಸ ನಾಯಕ’ ಜಗ್ಗೇಶ್ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.