ಬೆಂಗಳೂರು: ಸಾಹಿತ್ಯ ಸಂವಾದ, ಉಪನ್ಯಾಸ, ಚರ್ಚೆಗಳಿಗೆ ಖುದ್ದು ಹಾಜರಾಗಿ ಅವುಗಳ ಭಾಗವೇ ಆಗುವ ಅಂದವೇ ಬೇರೆ. ಐದಾರು ದಶಕ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯಿಂದ ಚಾಲ್ತಿಯಲ್ಲಿರುವ ಈ ರೂಢಿಯನ್ನು, ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಒಗ್ಗಿಸುವ ಯತ್ನಕ್ಕೆ ಕನ್ನಡ ಸಾರಸ್ವತ ಲೋಕ ತೆರೆದುಕೊಳ್ಳುತ್ತಿದೆ.
ಬೆರಳ ತುದಿಯಲ್ಲಿಯೇ ಜಗತ್ತಿನ ಆಗುಹೋಗುಗಳನ್ನೆಲ್ಲಾ ಜಾಲಾಡಿ ಬಿಡುವ ಈ ಹೊತ್ತಿನ ಹೊಸ ಸಾಧ್ಯತೆ
ಗಳಿಗೆ ಕನ್ನಡದ ಸಾಹಿತಿ–ವಿಮರ್ಶಕರೂ ಅಡಿ ಇಡತೊಡಗಿದ್ದಾರೆ. ಯುಟ್ಯೂಬ್, ಪಾಡ್‌ಕಾಸ್ಟ್‌ಗಳ ಮೂಲಕ ಸಂವಾದ ನಡೆಸುವ, ಉಪನ್ಯಾಸ ನೀಡುವ, ವಿಮರ್ಶೆ ಮಾಡುವ ಈ ಹೊತ್ತಿನ ಪ್ರಯತ್ನಕ್ಕೆ ಕನ್ನಡದ ಸಾಹಿತಿ–ವಿಮರ್ಶಕರು ಕೈಇರಿಸಿದ್ದಾರೆ.
ಕನ್ನಡದ ಕೆಲ ಸಾಹಿತ್ಯಾಸಕ್ತರು ನಡೆಸುತ್ತಿರುವ ಕಥನ ಸ್ಟುಡಿಯೊ ಎಂಬ ಯೂಟ್ಯೂಬ್ ವಾಹಿನಿ ಇದಕ್ಕೊಂದು ನಿದರ್ಶನ. ಕನ್ನಡದ ಸಾಹಿತಿ–ವಿಮರ್ಶಕರನ್ನು ಕೂರಿಸಿ, ಕನ್ನಡ ಸಾಹಿತ್ಯದ ಪ್ರಮುಖ ಕೃತಿ–ಘಟ್ಟಗಳ ಬಗ್ಗೆ ಮಾತನಾಡಿಸುವ ಕೆಲಸವನ್ನು ಕಥನ ಸ್ಟುಡಿಯೊ ಬಳಗ ಮಾಡುತ್ತಿದೆ.
ವಿಮರ್ಶಕ ರಹಮತ್ ತರೀಕೆರೆ ಅವರೊಂದಿಗೆ ಎರಡು ವರ್ಷಗಳ ಹಿಂದೆ ನಡೆಸಿದ್ದ ಸಂವಾದದ ಎರಡು ಭಾಗಗಳು ಕಥನ ಸ್ಟುಡಿಯೊ ವಾಹಿನಿಯಲ್ಲಿ ಲಭ್ಯವಿವೆ. ತಮ್ಮ ಬಾಲ್ಯ, ಅಪ್ಪ–ಅಮ್ಮ, ತಾವು ಬೆಳೆದ ಪರಿಸರದ ಜತೆಗೆ ಈ ಹೊತ್ತಿನ ಸಾಹಿತ್ಯ ಲೋಕದ ದಿಕ್ಕು–ದೆಸೆಗಳ ಬಗ್ಗೆ ರಹಮತ್ ತರೀಕೆರೆ ಅವರ ಮಾತುಗಳನ್ನು ಒಳಗೊಂಡ ಈ ವಿಡಿಯೊಗಳು ಈವರೆಗೆ ಆರು ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿವೆ.
ಈಗ್ಗೆ ತಿಂಗಳ ಹಿಂದಿನಿಂದ ಮತ್ತೆ ಅಂಥದ್ದೊಂದು ಪ್ರಯತ್ನಕ್ಕೆ ಕಥನ ಸ್ಟುಡಿಯೊ ಚಾಲನೆ ನೀಡಿದ್ದು, ಹೊಸದಾಗಿ ಎಂಟು ವಿಡಿಯೊಗಳನ್ನು ಕನ್ನಡದ ಓದುಗರಿಗೆ ತೆರೆದಿಟ್ಟಿದೆ. ಆಧುನಿಕ ಕನ್ನಡ ಸಾಹಿತ್ಯದ ನವ್ಯ ಕಾಲಘಟ್ಟದಲ್ಲಿ ಗುರುತಿಸಿಕೊಂಡಿದ್ದ ಲೇಖಕಿ ರಾಜಲಕ್ಷ್ಮಿ ಎನ್. ರಾವ್ ಅವರೊಂದಿಗಿನ ಸಂವಾದದ ಎರಡು ಕಂತುಗಳನ್ನು ಬಿತ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.