ADVERTISEMENT

ಮರಾಠ ನೆಲದಲ್ಲಿ ‘ಕನ್ನಡ’ ಕಾಲೇಜು

ಪಿಯುಸಿ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿಯೇ ಬೋಧಿಸುತ್ತಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ

ಬಸವರಾಜ ಸಂಪಳ್ಳಿ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ 
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ    

ವಿಜಯಪುರ: ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ‘ಸಂಖ’ ಗ್ರಾಮದಲ್ಲಿರುವ ‘ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ’ಯ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ನಿಕಾಯದ ವಿಷಯಗಳನ್ನು ಕನ್ನಡ ಭಾಷೆಯಲ್ಲಿಯೇ ಬೋಧಿಸಲಾಗುತ್ತಿದೆ. 

ಸಂಸ್ಥೆಯ ಆರ್‌.ಕೆ.ಪಾಟೀಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ರಸಾಯನವಿಜ್ಞಾನ, ಜೀವವಿಜ್ಞಾನ, ಭೌತವಿಜ್ಞಾನ, ಗಣಿತ ವಿಷಯಗಳ ಬೋಧನೆ ಕನ್ನಡದಲ್ಲೇ ನಡೆದಿದೆ. 

‘ಬೋಧನೆ ಜೊತೆಗೆ ವಿಷಯದ ಟಿಪ್ಪಣಿಯನ್ನು ಕನ್ನಡದಲ್ಲೇ ಬರೆಸುತ್ತೇವೆ. ಇದರಿಂದ ಪರೀಕ್ಷೆಗೆ ಅನುಕೂಲ. ಕನ್ನಡದಲ್ಲಿ  ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳು ವಿಜ್ಞಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘1997ರಿಂದಲೂ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧಿಸಲಾಗುತ್ತಿದೆ. ಈ ವರ್ಷ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಲಾ 80 ವಿದ್ಯಾರ್ಥಿಗಳು ಕನ್ನಡದಲ್ಲೇ ವ್ಯಾಸಂಗ ಮಾಡುತ್ತಾರೆ’ ಎಂದು ತಿಳಿಸಿದರು.

‘ಅಲ್ಲದೆ, ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಸಿಇಟಿ, ನೀಟ್‌ ತರಬೇತಿ ನೀಡುತ್ತೇವೆ. ಪ್ರತಿ ವರ್ಷ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಶೇ 90ಕ್ಕೂ ಹೆಚ್ಚು ಫಲಿತಾಂಶ ಪಡೆಯುತ್ತಾರೆ’ ಎಂದು ಅವರು ಹೇಳಿದರು.

‘ವೈದ್ಯಕೀಯ, ಎಂಜಿನಿಯರಿಂಗ್‌, ಬಿ.ಎಸ್‌ಸಿ ತೋಟಗಾರಿಕೆ/ಕೃಷಿ ಪದವಿ ಸೇರಿ ತಾಂತ್ರಿಕ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಕಲಿತ ನೂರಾರು ವಿದ್ಯಾರ್ಥಿಗಳು ಬೆಂಗಳೂರು, ಪುಣೆ, ಮುಂಬೈ ಸೇರಿ ದೇಶ, ವಿದೇಶಗಳಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲೂ ಉದ್ಯೋಗ ಗಿಟ್ಟಿಸಿದ್ದಾರೆ’ ಎಂದರು.

ಕನ್ನಡಿಗರಿಗೆ ಆಸರೆ: ‘ಸಂಖ ಸೇರಿ ಜತ್ತ ತಾಲ್ಲೂಕಿನ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕನ್ನಡ ಭಾಷಿಕರು ಅಧಿಕ  ಸಂಖ್ಯೆಯಲ್ಲಿದ್ದಾರೆ. ಮಾತೃಭಾಷೆ ಕನ್ನಡವಾಗಿದ್ದು, ಮರಾಠಿ ಭಾಷೆ ಸರಳವಲ್ಲ. ಇಂಗ್ಲಿಷ್‌ ಕಠಿಣ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕನ್ನಡಕ್ಕೆ ಆದ್ಯತೆ ನೀಡುತ್ತಾರೆ’ ಎಂದು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಕಿರಣ ಪಾಟೀಲ ಅವರು ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ನಮ್ಮ ಸಂಸ್ಥೆ ಮತ್ತು ಕಾಲೇಜಿನಲ್ಲಿ ಕನ್ನಡದಲ್ಲಿ ಬೋಧನೆ ಮಾಡುತ್ತಿರುವುದಕ್ಕೆ ಇದುವರೆಗೂ ಯಾರಿಂದಲೂ ಅಭ್ಯಂತರ, ಆಕ್ಷೇಪ ವ್ಯಕ್ತವಾಗಿಲ್ಲ. ಪ್ರೋತ್ಸಾಹ ಲಭಿಸಿದೆ’ ಎಂದು ಹೇಳಿದರು.

‘ಗಡಿನಾಡಿನಲ್ಲಿ ಕನ್ನಡ ಸೇವೆ’

ಸಂಖ ಗ್ರಾಮದಲ್ಲಿರುವ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ 1967ರಲ್ಲಿ ಸ್ಥಾಪನೆ ಆಗಿದ್ದು ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿ ಹಂತದವರೆಗೆ ಶಿಕ್ಷಣ ನೀಡುತ್ತಿದೆ. ಸುಮಾರು 3 ಸಾವಿರ ವಿದ್ಯಾರ್ಥಿಗಳಿದ್ದಾರೆ.  1978ರಲ್ಲಿ ವಸತಿ ನಿಲಯದ ಸೌಲಭ್ಯ ಲಭ್ಯವಿದ್ದು 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಸೌಲಭ್ಯ ನೀಡಲಾಗುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕನ್ನಡ ಮರಾಠಿ ಇಂಗ್ಲಿಷ್‌ ಮಾಧ್ಯಮಗಳಲ್ಲೂ ಬೋಧನೆ ಇದೆ.

ವಿಜ್ಞಾನ ವಿಷಯಗಳ ಬೋಧನೆಗೆ ಸಂಬಂಧಿಸಿದಂತೆ ಕನ್ನಡ ಪುಸ್ತಕಗಳ ಕೊರತೆ ಇದೆ. ಕನ್ನಡದಲ್ಲಿ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳ ಕೊರತೆ ನೀಗಲು ಕರ್ನಾಟಕ ಸರ್ಕಾರ ನೆರವಾಗಬೇಕು.
–ಕಿರಣ ಪಾಟೀಲ, ಆಡಳಿತ ಮಂಡಳಿ ನಿರ್ದೇಶಕ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಂಖ ಮಹಾರಾಷ್ಟ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.