ADVERTISEMENT

'ಕನ್ನಡ ಕಲಿಯೋಣ' ಕನ್ನಡೇತರರಿಗೆ ಸರಳ ಕನ್ನಡ ಕಲಿಸುವ ತಂಡ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 12:58 IST
Last Updated 31 ಅಕ್ಟೋಬರ್ 2019, 12:58 IST
ಕನ್ನಡ ಕಲಿಯೋಣ
ಕನ್ನಡ ಕಲಿಯೋಣ   

ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಬಹಳಷ್ಟು ಜನರು ಕನ್ನಡ ಕಲಿಕೆಯಿಂದ ಬಹು ದೂರವೇ ಉಳಿಯುತ್ತಾರೆ. ಅವರಿಗೆಲ್ಲ ನಮ್ಮ ಭಾಷೆ ಕಲಿಯಲು ಅವಕಾಶ, ಕಲಿಸುವ ಸ್ಫೂರ್ತಿ ಅತ್ಯವಶ್ಯಕ. ಇಂಥದ್ದೇ ಯೋಚನೆಗಳೊಂದಿಗೆ ಸಮಾನಮನಸ್ಕರೆಲ್ಲ ಜೊತೆಯಾಗಿ ಕಟ್ಟಿದ್ದು 'ಕನ್ನಡ ಕಲಿಯೋಣ' ತಂಡ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಒಂದು ಕಡೆ ಸೇರಿ ಹೊರನಾಡಿನವರಿಗೆ ಸರಳವಾಗಿ ಕನ್ನಡ ದಾಟಿಸುವ ಕೆಲಸ ನಿರಂತರವಾಗಿ ನಡೆಸುತ್ತಿದ್ದಾರೆ. ಕನ್ನಡೇತರರು ನಿತ್ಯ ವ್ಯವಹಾರಗಳಲ್ಲಿ ಕನ್ನಡ ಬಾರದೆ ಅನೇಕ ಬಾರಿ ತೊಂದರೆಗೆ ಸಿಲುಕುವುದೂ ಇದೆ. ಕನ್ನಡದ ಬಗ್ಗೆ ಆಸಕ್ತಿಯೂ ಮೂಡಬೇಕು, ಬಹುಬೇಗ ಕನ್ನಡ ಕಲಿಕೆಯೂ ನಡೆಯಬೇಕೆಂಬ ಅಂಶಗಳನ್ನು ಗಮನದಲ್ಲಿರಿಸಿ ತಂಡದ ಮುಂದಾಳು ಸತೀಶ್‌ ನಾಯ್ಡು ಅವರು ಕನ್ನಡ ತರಬೇತಿಗೆ ಪಠ್ಯ ಹಾಗೂ ರೂಪುರೇಷೆ ಸಿದ್ಧಪಡಿಸಿದರು.

ಅಂಗಡಿಯವರೊಂದಿಗೆ ಸಂವಾದ, ಆಟೊ, ಬಸ್‌ನಲ್ಲಿ ನಡೆಸುವ ಸಂಭಾಷಣೆ, ಕಚೇರಿಯಲ್ಲಿ ಮಾತು–ಕತೆ,..ಹೀಗೆ ಹಲವು ಸಂದರ್ಭಗಳಲ್ಲಿ ಬಳಸಬೇಕಾದ ಕನ್ನಡ ಪದ ಮತ್ತು ವಾಕ್ಯಗಳನ್ನು ಕಲಿಸಿಕೊಡುವ ಚಟುವಟಿಕೆಯನ್ನು ತಂಡದ ಸದಸ್ಯರಾದ ರೇಣುಕಾರಾಧ್ಯ, ಪ್ರತೀಕ್‌ ಜೈನ್‌, ಶ್ವೇತಾ ನಡೆಸುತ್ತಿದ್ದಾರೆ. ಕಚೇರಿ ಕೆಲಸಗಳು ಮುಗಿದ ನಂತರ 1 ತಾಸು ಕನ್ನಡ ಕಲಿಸಲು ಮೀಸಲು. ತಾವು ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಆಸಕ್ತರನ್ನು ಗುರುತಿಸಿ ಹತ್ತು ದಿನಗಳ ವರೆಗೆ ನಿತ್ಯ 1 ತಾಸು ಕನ್ನಡ ಪಾಠ ಮಾಡಲಾಗುತ್ತಿದೆ.

ADVERTISEMENT

ಹೀಗೆ ಹತ್ತು ದಿನಗಳಲ್ಲಿ ಒಂದು ಬ್ಯಾಚ್‌ನ ಜನರು ಕನ್ನಡ ಮಾತನಾಡಲು ಶುರು ಮಾಡುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಮಾತ್ರವಲ್ಲದೇ ಅಪಾರ್ಟ್‌ಮೆಂಟ್‌, ಗೇಟೆಡ್‌ಕಮ್ಯುನಿಟಿಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಕನ್ನಡ ಕಲಿಸುವ ಸೇವೆಯಲ್ಲಿ ತೊಡಗಿರುವ ತಂಡವು ಹತ್ತಾರು ಬ್ಯಾಚ್‌ಗಳಲ್ಲಿ ನೂರಾರು ಜನರಲ್ಲಿ ಕನ್ನಡ ಅಕ್ಷರಗಳನ್ನು ಬಿತ್ತುವ ಪ್ರಯತ್ನ ನಡೆಸಿದೆ.

ಕನ್ನಡ ಕಲಿಯೋಣ ಕಾರ್ಯಕ್ರಮದ ಮೂಲಕ ಕನ್ನಡ ಕಲಿತಿರುವ ಕನ್ನಡೇತರರು ಸ್ವಯಂ ಪ್ರೇರಿತರಾಗಿ ಬೇರೆಯವರಿಗೂ ಕನ್ನಡ ಕಲಿಸಿಕೊಟ್ಟ ನಿದರ್ಶನಗಳಿವೆ ಎಂದು ಸಾರ್ಥಕ ನಗೆಯನ್ನು ಬೀರುತ್ತಾರೆ ತಂಡದ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.