ADVERTISEMENT

ಕನ್ನಡ ರಾಜ್ಯೋತ್ಸವ ಆಚರಿಸಿದ ಸ್ಕಾಟ್ಲೆಂಡ್‌ನ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 8:54 IST
Last Updated 14 ನವೆಂಬರ್ 2022, 8:54 IST
   


ಪ್ರಸಾದ ಸಾಲವಾಡಗಿ
ಸ್ಕಾಟ್ಲೆಂಡ್ (ಎಡಿನ್‌ಬರ್ಗ್): ನವೆಂಬರ್ 12 ರಂದು ಸ್ಕಾಟ್ಲೆಂಡ್ ರಾಜಧಾನಿ ಎಡಿನ್‌ಬರ್ಗ್‌ನ ಸೇಂಟ್ ಕಥಬರ್ಟ್ಸ್ ಚರ್ಚ್‌ನಲ್ಲಿ ಕನ್ನಡಿಗರ ಸಂಭ್ರಮ ಮನೆ ಮಾಡಿತ್ತು.

ಎಡಿನ್‌ಬರ್ಗ್‌ನ ಕನ್ನಡ ಅಸೋಸಿಯೇಶನ್ ಆಫ್ ಸ್ಕಾಟ್ಲೆಂಡ್ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಧ್ವಜಗಳು ರಾರಾಜಿಸಿದವು. ಕನ್ನಡಿಗರು ಹೊಸಬಟ್ಟೆ ಧರಿಸಿ ಸಡಗರದಿಂದ ಭಾಗವಹಿಸಿದ್ದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಅನುರಣನ ನಡೆಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಮಕ್ಕಳು, ಮಹಿಳೆಯರು, ಪುರುಷರು ನೃತ್ಯ ಮಾಡಿ ಸಂಭ್ರಮಿಸಿದರು.

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು. ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ಇತರ ಹಾಡುಗಳು ಚರ್ಚ್‌ನ ತುಂಬೆಲ್ಲ ಕನ್ನಡದ ಇಂಪು ಪಸರಿಸಲು ಕಾರಣವಾದವು. ನೃತ್ಯ, ಹಾಡು, ಫ್ಯಾಷನ್ ಷೋಗಳು ನೆರೆದವರನ್ನು ರಂಜಿಸಿದವು. ಸವಿ ಸವಿಯಾದ ಅಡುಗೆ ಹೊಟ್ಟೆಗೆ ಹಿತಕಾರಿಯಾಗಿತ್ತು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಭಾರತದ ರಾಯಭಾರಿ ಬಿಜಯ್ ಸೆಲ್ವರಾಜ್ ಮಾತನಾಡಿ, ಕನ್ನಡಿಗರು ಎಡಿನ್‌ಬರ್ಗ್‌ನಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಇಷ್ಟೊಂದು ವೈಭವೋಪೇತವಾಗಿ ಆಚರಿಸುತ್ತಿರುವುದು ನನ್ನನ್ನು ಪುಳಕಿತನನ್ನಾಗಿಸಿದೆ ಎಂದರು.

ಕೌನ್ಸಿಲರ್ ಯೆಮಿ ಮೆಕ್ನಿಸ್-ಮೆಖನ್ ಹಾಗೂ ಚರ್ಚ್‌ನ ಮುಖ್ಯಸ್ಥ ಫಾದರ್ ಪ್ರಾನ್ಸಿಸ್ ಉತುಟೋ ಸಾನಿಧ್ಯ ವಹಿಸಿದ್ದರು.

ಕೊನೆಯಲ್ಲಿ ಸಂಘದ ಹರೀಶ ನಾಗಪ್ಪ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಪ್ರಾಯೋಜಕರಿಗೂ, ಆಗಮಿಸಿದ ಅತಿಥಿಗಳಿಗೂ ಹಾಗೂ ನೆರೆದ ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳನ್ನು ತಿಳಿಸಿದರು.

ರಾಘವೇಂದ್ರ ಕಾಮತ್, ಶಿರೀಷ ಕಾಂತಾರಾಜ, ಆಶಾ ಭಾರದ್ವಾಜ, ವಿಮಲ್ ಡಿಸೋಜಾ, ಸೌಮ್ಯ, ಶ್ರುತಿ ಅರವಿಂದ್, ಪಾವನಾ ನಾಗರಾಜ, ಜಗದೀಶ ಹಿರೇಮಠ, ರಾಧಾಕೃಷ್ಣ, ಧೀರಜ್ ಮಲ್ಲಪ್ಪ, ಪ್ರಸಾದ ಸಾಲವಾಡಗಿ ಇತರರು ಕಾರ್ಯಕ್ರಮದ ಆಯೋಜನೆಯ ಹೊಣೆ ಹೊತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.