ADVERTISEMENT

ಕಸಾಪ| ಸಾಹಿತ್ಯ ಸಮ್ಮೇಳನ ಮುಂದೂಡಲು ಸರ್ಕಾರಕ್ಕೆ ಜೋಶಿ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:46 IST
Last Updated 20 ಮೇ 2022, 15:46 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ಹಾವೇರಿಯಲ್ಲಿ 2022ರ ಸೆ.23 ರಿಂದ ಸೆ.25 ರವರೆಗೆ ನಡೆಸಲು ನಿರ್ಧರಿಸಿದ್ದ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಿ,ನ.11ರಿಂದ 13 ರವರೆಗೆ ನಡೆಸಲು ಅವಕಾಶ ಮಾಡಿಕೊಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಏ.23ರಂದು ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಒಮ್ಮತದಿಂದ ದಿನಾಂಕ ನಿಗದಿಪಡಿಸಲಾಗಿತ್ತು. ಸಮ್ಮೇಳನ ಮುಂದೂಡುವಂತೆ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದಿದ್ದ ತರಳಬಾಳು ಬೃಹನ್ಮಠದ ಕಾರ್ಯದರ್ಶಿ, ‘ಸೆ.23 ಮತ್ತು ಸೆ.24ರಂದು ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭ ಇದೆ. ಹಾವೇರಿ, ರಾಣೇಬೆನ್ನೂರು, ರಟ್ಟಿಹಳ್ಳಿ, ಹಿರೇಕೆರೂರು ಮೊದಲಾದ ಭಾಗಗಳಿಂದ ಬರುವ ಭಕ್ತರಿಗೆ ತೊಂದರೆಯಾಗಲಿದೆ. ಹಾಗಾಗಿ ಬೇರೆ ದಿನ ಸಮ್ಮೇಳನ ನಡೆಸಿ’ ಎಂದು ಮನವಿ ಮಾಡಿಕೊಂಡಿದ್ದರು.

ADVERTISEMENT

‘ಸಮ್ಮೇಳನದ ದಿನಾಂಕಗಳನ್ನು ಮುಂದೂಡುವಂತೆ ಅನೇಕರು ಮನವಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ತು ಚುನಾವಣೆಯಿಂದಾಗಿ ಜೂ. 17ರವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಹೀಗಾಗಿ, ಸಮ್ಮೇಳನದ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಸಚಿವರು, ಶಾಸಕರು ಸಮ್ಮೇಳನದ ಪೂರ್ವಸಿದ್ಧತಾ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಮ್ಮೇಳನದ ತಯಾರಿಗೆ ತೊಂದರೆಯಾಗಲಿದೆ’ ಎಂದು ಮಹೇಶ ಜೋಶಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಹಾವೇರಿ ಜಿಲ್ಲೆಯವರಾದ ಕನಕದಾಸರ ಜಯಂತಿ ನ.11ರಂದು ಇದೆ. ಸಾಹಿತ್ಯ ಸಮ್ಮೇಳನದಲ್ಲೂ ಅವರಿಗೆ ಸೂಕ್ತ ಗೌರವ ಸಲ್ಲಿಸಬೇಕು. ಹಾಗಾಗಿ ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ಸಮ್ಮೇಳನ ನಡೆಸಲು ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.