ಬೆಂಗಳೂರು: ಮೈಕ್ರೊಸಾಫ್ಟ್ ಕಂಪನಿಯ ‘ಎಂಎಸ್ ಆಫೀಸ್ಮಾ’ ಮಾದರಿಯಲ್ಲೇ ಕನ್ನಡದಲ್ಲೂ ‘ನುಡಿ ಬರವಣಿಗೆ ೧.೦’ ಎಂಬ ಹೊಸ ತಂತ್ರಾಂಶವನ್ನು ಕನ್ನಡ ಗಣಕ ಪ್ರತಿಷ್ಠಾನ ಅಭಿವೃದ್ಧಿಪಡಿಸಿದೆ.
ಎಂಎಸ್ ಆಫೀಸ್ ತಂತ್ರಾಂಶದಲ್ಲಿ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಡೇಟಾಬೇಸ್‌ನಂತಹ ತಂತ್ರಾಂಶಗಳಿರುವಂತೆ, ‘ನುಡಿ ಬರವಣಿಗೆ ೧.೦’ ತಂತ್ರಾಂಶದಲ್ಲೂ ‘ನುಡಿ ಬರವಣಿಗೆ (ವರ್ಡ್), ನುಡಿ ಲೆಕ್ಕ (ಎಕ್ಸೆಲ್), ನುಡಿ ಪ್ರಸ್ತುತಿ (ಪವರ್‌ಪಾಯಿಂಟ್), ನುಡಿ ದತ್ತ (ಡೇಟಾಬೇಸ್)’ ಎಂಬ ತಂತ್ರಾಂಶಗಳಿರುತ್ತವೆ.
‘ವರ್ಡ್’ನಂತೆ ಕೆಲಸ ಮಾಡಬಲ್ಲ ‘ನುಡಿ ಬರವಣಿಗೆ’ಯನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಆಗಸ್ಟ್ ತಿಂಗಳಲ್ಲಿ ಜನಾರ್ಪಣೆಗೊಳಿಸಲು ಸಿದ್ಧತೆ ನಡೆದಿದೆ’ ಎಂದು ಕನ್ನಡ ಗಣಕ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕನ್ನಡ ಗಣಕ ಪರಿಷತ್ತು ಈಗ ಕನ್ನಡ ಗಣಕ ಪ್ರತಿಷ್ಠಾನ ಎಂಬ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
ಬಳಕೆದಾರ ಸ್ನೇಹಿಯಾಗಲಿರುವ ‘ನುಡಿ ಬರವಣಿಗೆ ೧.೦’ ತಂತ್ರಾಂಶವು, ಪ್ರಸ್ತುತ ಪರವಾನಗಿಯೊಂದಿಗೆ ಬಳಸುತ್ತಿರುವ ಎಂಎಸ್ ಆಫೀಸ್‌ನಂತಹ ತಂತ್ರಾಂಶಗಳಿಗೆ ಪರ್ಯಾಯವಾಗುವ ಸಾಧ್ಯತೆ ಇದೆ.
‘ನುಡಿ ಬರವಣಿಗೆ’ ಹೀಗಿದೆ: ‘ನುಡಿ ಬರವಣಿಗೆ’ಯ ಐಕಾನ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಫೈಲ್ ತೆರೆದುಕೊಳ್ಳುತ್ತದೆ. ಮೇಲ್ಭಾಗದ ಪಟ್ಟಿಯಲ್ಲಿ ‘ಫೈಲ್, ಸೇರಿಸು, ನೋಟ, ಪುಟವಿನ್ಯಾಸ, ನುಡಿ ವ್ಯವಸ್ಥಾಪಕ, ವಾಗಕ್ಷರ, ಸಹಾಯ, ಪರಿಶೀಲಿಸು’– ಎಂಬ ಸೌಲಭ್ಯಗಳಿವೆ.
ತೆರೆದ ಫೈಲ್‌ನಲ್ಲಿ ಯೂನಿಕೋಡ್ ಕನ್ನಡದಲ್ಲಿ ಟೈಪ್ ಮಾಡಬಹುದು. ‘ನುಡಿ’ ತಂತ್ರಾಂಶಗಳ ಬಳಕೆಗೆ ಇರುವಂತೆ (ಸ್ಕ್ರಾಲ್‌ಲಾಕ್, ಎಫ್12 ಕೀ ತರಹ) ಕೀ ಲಾಕ್‌ಗಳಿಲ್ಲದೇ ನೇರವಾಗಿ ಕನ್ನಡ ಟೈಪ್ ಮಾಡಬಹುದು, ಕನ್ನಡ ಟೈಪ್ ಮಾಡುವಾಗ, ಇಂಗ್ಲಿಷ್ ಪದಗಳ ಬಳಕೆ ಮಾಡಬೇಕೆಂದರೆ, ವಿಂಡೊ ಗುಂಡಿಯ ಜೊತೆಗೆ ಸ್ಪೇಸ್ ಬಾರ್ ಒತ್ತಿದರೆ ಸಾಕು. ವಾಪಸ್ ಕನ್ನಡಕ್ಕೆ ಬರಲು ಇದೇ ವಿಧಾನ.
ಹೊಂದಾಣಿಕೆಯ ತಂತ್ರಾಂಶ: ‘ಈ ತಂತ್ರಾಂಶ, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂಗಿಂತ (ಒಎಸ್) ಮೇಲ್ಪಟ್ಟ ಎಲ್ಲ ಒಎಸ್ ಆಧಾರಿತ ತಂತ್ರಾಂಶಗಳಿಗೂ ಹೊಂದಿಕೆಯಾಗುತ್ತದೆ. ಮಾತ್ರವಲ್ಲ, ಪುಟವಿನ್ಯಾಸದ ತಂತ್ರಾಂಶಗಳಿಗೂ ಹೊಂದಿಕೊಳ್ಳುತ್ತದೆ. ಇದನ್ನು ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗೂ ಅಳವಡಿಸಬಹುದು.
ಟೈಪ್ ಮಾಡಿದ ಫೈಲ್ ಅನ್ನು ವರ್ಡ್ (97, 2003 ವರ್ಡ್ ಫಾರ್ಮ್ಯಾಟ್), ಟೆಕ್ಸ್ಟ್, ಆರ್‌ಟಿಎಫ್, ವೆಬ್‌ಪೇಜ್, ಒಡಿಟಿ ಫಾರ್ಮ್ಯಾಟ್‌ನಲ್ಲೂ (ಸೇವ್) ಉಳಿಸಬಹುದು. ಮಾತ್ರವಲ್ಲ, ‘ಪಿಡಿಎಫ್’ ಆಗಿ ಪರಿವರ್ತಿಸುವ ಸೌಲಭ್ಯ ಇದೆ. ಮುಂದೆ ಧ್ವನಿಮುದ್ರಿತ ಫೈಲ್ ಅನ್ನು ಪಠ್ಯವಾಗಿಸುವಂತಹ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಹಲವು ಸೌಲಭ್ಯಗಳು
ಪಠ್ಯ ಟೈಪ್ ಮಾಡುವ ಜೊತೆಗೆ, ‘ಕಾಗುಣಿತ ಪರಿಶೀಲಿಸು’ (ಸ್ಪೆಲ್ ಚೆಕ್), ‘ಪದ ಹುಡುಕು ಮತ್ತು ಬದಲಿಸು’, ಧ್ವನಿಯನ್ನು ಪಠ್ಯವಾಗಿಸುವ ‘ವಾಗಕ್ಷರ’ ಎಂಬ ಸೌಲಭ್ಯಗಳಿವೆ. ಪಠ್ಯದಲ್ಲಿ ಪ್ರತಿಕ್ರಿಯೆಗಳನ್ನು ದಾಖಲಿಸುವ ಅವಕಾಶವೂ ಇದೆ. ತಂತ್ರಾಂಶದಲ್ಲಿ ವಿವಿಧ ಯೂನಿಕೋಡ್ ಫಾಂಟ್‌ಗಳ ಜೊತೆಗೆ, ಕನ್ನಡದ ನಿಘಂಟು ಇದೆ. ಬಳಕೆದಾರರು ಹೆಚ್ಚು ಪದರಾಶಿಯನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.
‘ನಾವು ಅಭಿವೃದ್ಧಿಪಡಿಸಿರುವ ‘ನುಡಿ ಬರವಣಿಗೆ ೧.೦’ ತಂತ್ರಾಂಶವನ್ನು ಸೋರ್ಸ್ ಕೋಡ್ ಸಹಿತ ಓಪನ್ ಸೋರ್ಸ್‌ನಲ್ಲಿ (ಗಿಟ್ ಹಬ್) ಇಡುತ್ತೇವೆ. ಬೇರೆ ಯಾರಾದರೂ ಇದನ್ನು ತೆಗೆದುಕೊಂಡು ಅಭಿವೃದ್ಧಿಪಡಿಸಲು ಅವಕಾಶವಿದೆ’ ಎಂದು ನರಸಿಂಹ ಮೂರ್ತಿ ತಿಳಿಸಿದರು.
* ಉಚಿತ ತಂತ್ರಾಂಶ, ಬಳಕೆಯೂ ಸುಲಭ * ನವೆಂಬರ್ ವೇಳೆಗೆ ಪೂರ್ಣ ‘ಪ್ಯಾಕೇಜ್’ * ಕಾಗುಣಿತ ಪರಿಶೀಲನೆ ಸೇರಿದಂತೆ ಹಲವು ಸೌಲಭ್ಯ
ಆರು ತಿಂಗಳಲ್ಲಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ನವೆಂಬರ್ ಹೊತ್ತಿಗೆ ಇನ್ನಷ್ಟು ತಂತ್ರಾಂಶಗಳ ಅಭಿವೃದ್ಧಿಯೊಂದಿಗೆ ‘ನುಡಿ ಬರವಣಿಗೆ ೧.೦’ ಪೂರ್ಣಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗಲಿದೆ.ಜಿ.ಎನ್. ನರಸಿಂಹಮೂರ್ತಿ ಕಾರ್ಯದರ್ಶಿ ಕನ್ನಡ ಗಣಕ ಪ್ರತಿಷ್ಠಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.