ಬೆಂಗಳೂರು: ‘ಕಮ್ಯುನಿಸ್ಟ್ ಸಿದ್ಧಾಂತ ಪ್ರತಿಪಾದಿಸಿದ್ದಕಾರ್ಲ್‌ಮಾರ್ಕ್ಸ್ ಮನುಷ್ಯ ಆಸ್ತಿ ಹೊಂದಬಾರದು, ಯಾವುದೇ ಧರ್ಮ ಅನುಸರಿಸಬಾರದು ಎಂದು ಹೇಳಿದ್ದ. ಎಲ್ಲ ಮಹಿಳೆಯರು ಎಲ್ಲರಿಗೂ ದೊರೆಯುಂತಾಗಬೇಕು ಮತ್ತು ಅವರೆಲ್ಲರೂ ವೇಶ್ಯೆಯರಾಗಬೇಕು ಎಂದೂ ಪ್ರತಿಪಾದಿಸಿದ್ದ. ಇಂತಹ ತತ್ವಗಳ ಆಧಾರದಲ್ಲೇ ಜವಹಾರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಕಾರ್ಯನಿರ್ವಹಿಸುತ್ತಿದೆ’ ಎಂದು ಚೆನ್ನೈನ ಆರ್ಥಿಕ ತಜ್ಞ ಎಸ್. ಗುರುಮೂರ್ತಿ ಹೇಳಿದರು.
ನಗರದಲ್ಲಿ ಶನಿವಾರ ಆರ್‌ಎಸ್‌ಎಸ್ ನಾಯಕ ದತ್ತೋಪಂತ್ ಠೇಂಗಡಿ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂತಹ ತತ್ವಗಳನ್ನು ಪ್ರತಿಪಾದಿಸುವ ಸಿದ್ಧಾಂತವನ್ನು ನಂಬುವುದು ಹೇಗೆ. ಆದರೆ ಬುದ್ಧಿಜೀವಿಗಳು, ಪ್ರಗತಿಪರರು, ರಾಜಕಾರಣಿಗಳು, ಚಿಂತಕರು ಎನಿಸಿಕೊಂಡವರು ಹಾಗೂ ಮಾಧ್ಯಮಗಳು ಇಂತಹ ಸಿದ್ಧಾಂತವನ್ನು ಪ್ರಚಾರ ಮಾಡುತ್ತವೆ, ಹೊಗಳುತ್ತವೆ’ ಎಂದು ಅವರು ದೂರಿದರು.
‘ಹೊರಗಡೆಯಿಂದ ಬರುವ ಎಲ್ಲ ತತ್ವಗಳನ್ನೂ ನಾವು ಸಿದ್ಧಾಂತಗಳೆಂದು ಭಾವಿಸುತ್ತೇವೆ. ನಮ್ಮದು ಯಾವತ್ತೂ ಕಮ್ಯುನಿಸ್ಟ್ ರಾಷ್ಟ್ರವಾಗಿರಲಿಲ್ಲ. ಹಾಗಾಗಿ, ನಮಗೆ ಕಮ್ಯುನಿಸಂ ಏನೆಂದು ಸುಲಭವಾಗಿ ಅರ್ಥವಾಗುವುದಿಲ್ಲ. ಕಮ್ಯುನಿಸ್ಟರದು ಒಪ್ಪಂದ ಆಧಾರಿತ ಸಮಾಜ. ನಮ್ಮದು ಸಂಬಂಧ ಆಧಾರಿತ ಸಮಾಜ’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.