ADVERTISEMENT

ಕೋವಿಡ್: ದೈನಂದಿನ ಪರೀಕ್ಷೆ ಗುರಿ ಒಂದು ಲಕ್ಷಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:18 IST
Last Updated 3 ಡಿಸೆಂಬರ್ 2021, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಾಣುವಿನ ಓಮೈಕ್ರಾನ್ ತಳಿ ಪ್ರಕರಣಗಳು ಪತ್ತೆಯಾಗಿರುವುದರಿಂದ ದೈನಂದಿನ ಕೋವಿಡ್ ಪರೀಕ್ಷೆಗಳ ಗುರಿಯನ್ನು 70 ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಶೇ 70 ರಷ್ಟು ಪರೀಕ್ಷೆಗಳನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕವೇ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ‘ಒಟ್ಟು ಪರೀಕ್ಷೆಗಳಲ್ಲಿ ಶೇ 30 ರಷ್ಟು ಪರೀಕ್ಷೆಗಳನ್ನು ರ್‍ಯಾಟ್ ವಿಧಾನದಲ್ಲಿ ನಡೆಸಬೇಕು. ಎಲ್ಲ ಆರೋಗ್ಯ ಕಾರ್ಯಕರ್ತರು, ವಯಸ್ಸಾದವರು, ಅಸ್ವಸ್ಥರಾದವರು, ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು. ಈಗಾಗಲೇ ಶಾಲಾ–ಕಾಲೇಜುಗಳು ತೆರೆದಿರುವುದರಿಂದ ಜ್ವರ, ಶೀತ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ, ರ್‍ಯಾಟ್ ಮಾದರಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಬೇಕು’ ಎಂದು ತಿಳಿಸಿದ್ದಾರೆ.

‘ಹದಿನೈದು ದಿನಗಳಿಗೊಮ್ಮೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹೋಟೆಲ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ, ಮಾಲ್‌ಗಳ ಸ್ವಚ್ಛತಾ ಸಿಬ್ಬಂದಿ, ಕಾರ್ಖಾನೆಗಳ ಸಿಬ್ಬಂದಿ, ಕಚೇರಿಗಳು ಸೇರಿದಂತೆ ವಿವಿಧೆಡೆ ಕೆಲಸ ಮಾಡುವವರಿಗೆ ಸಾಮೂಹಿಕವಾಗಿ ಪರೀಕ್ಷೆ ಮಾಡಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ನಿಗದಿತ ಗುರಿಯಲ್ಲಿ ಶೇ 50 ರಷ್ಟು ಪರೀಕ್ಷೆಗಳನ್ನು ಜಿಲ್ಲಾ ಕೇಂದ್ರದಲ್ಲಿಯೇ ನಡೆಸಬೇಕು. ಒಟ್ಟು ಪರೀಕ್ಷೆಗಳಲ್ಲಿ ಶೇ 10 ರಷ್ಟು ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಮಾಡಬೇಕು. ಶಾಲೆಗಳಲ್ಲಿ ಕನಿಷ್ಠ ಶೇ 5 ರಷ್ಟು ವಿದ್ಯಾರ್ಥಿಗಳನ್ನಾದರೂ ಪ್ರತಿ ವಾರಕೋವಿಡ್ಪರೀಕ್ಷೆಗೆ ಒಳಪಡಿಸಬೇಕು’ ಎಂದು ಸೂಚಿಸಿದ್ದಾರೆ.

‘ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಎದುರಿಸುತ್ತಿರುವವರನ್ನು ಗುರುತಿಸಿ,ಕೋವಿಡ್ಪರೀಕ್ಷೆಗೆ ಒಳಪಡಿಸಬೇಕು. ಶಾಲಾ– ಕಾಲೇಜು, ಹೋಟೆಲ್‌, ಕಂಪನಿ, ಮಾಲ್‌ ಸೇರಿದಂತೆ ವಿವಿಧೆಡೆ ಸಾಮೂಹಿಕಕೋವಿಡ್ಪರೀಕ್ಷೆನಡೆಸಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

ಪ್ರಯಾಣಿಕರಿಗೆ ಪರೀಕ್ಷೆ:ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಅಪಾಯಕಾರಿ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.ಡಿ.1 ಮತ್ತು ಡಿ.2 ರಂದು ಅಪಾಯಕಾರಿ ದೇಶಗಳಿಂದ 1,565 ಮಂದಿ ಪ್ರಯಾಣಿಕರು ಬಂದಿದ್ದಾರೆ. ಎಲ್ಲರೂ ಪರೀಕ್ಷೆಗೆ ಒಳಗಾಗಿದ್ದು, ಯಾರಿಗೂ ಸೋಂಕು ತಗುಲಿಲ್ಲ ಎನ್ನುವುದು ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.