ADVERTISEMENT

ವಿಧಾನಸಭೆ ಚುನಾವಣೆಗೆ ‘ಕೈ’ ಟಿಕೆಟ್‌: 200 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:31 IST
Last Updated 12 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ₹ 5 ಸಾವಿರ ಶುಲ್ಕ ಪಾವತಿಸಿ ಕೆಪಿಸಿಸಿಯಿಂದ ಅರ್ಜಿ ಪಡೆದುಕೊಂಡಿದ್ದ 800 ಆಕಾಂಕ್ಷಿಗಳ ಪೈಕಿ 200 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಇದೇ 15ರವರೆಗೆ ಕೊನೆಯ ದಿನ.

‘ಈವರೆಗೆ ಅರ್ಜಿ ಸಲ್ಲಿಸಿದವರಲ್ಲಿ ಕೆ.ಆರ್‌. ನಗರದಿಂದ ಕಣಕ್ಕಿಳಿಯಲು ಬಯಸಿರುವ ಐಶ್ವರ್ಯಾ ಮಹದೇವ್‌ (27) ಅತಿ ಕಿರಿಯ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಇಚ್ಛಿಸಿರುವ ಶಾಮನೂರು ಶಿವಶಂಕರಪ್ಪ (92) ಅತಿ ಹಿರಿಯ ಆಕಾಂಕ್ಷಿ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಉಳಿದಂತೆ, ಬಸವನಬಾಗೇವಾಡಿ ಕ್ಷೇತ್ರದ ಹಾಲಿ ಶಾಸಕ ಶಿವಾನಂದ ಪಾಟೀಲ ಮತ್ತೊಮ್ಮೆ ಟಿಕೆಟ್‌ ಬಯಸಿದ್ದರೆ ಮತ್ತು ಅವರ ಮಗಳು ಸಂಯುಕ್ತಾ ಪಾಟೀಲ ಅವರು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು ನಂಜನಗೂಡು, ಅವರ ಮಗ ಸುನೀಲ್‌ ಬೋಸ್‌ ಟಿ. ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರೂ ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಅರ್ಜಿ ಹಾಕಿದ್ದಾರೆ. ಚಿತ್ರನಟ ರಾಜಶೇಖರ ಕೋಟ್ಯಾನ್ ಅವರು ಮೂಡಬಿದಿರೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಸಾಮಾನ್ಯ ವರ್ಗದ ಆಕಾಂಕ್ಷಿಗಳು ಅರ್ಜಿ ಶುಲ್ಕದ ಜೊತೆಗೆ ₹ 2 ಲಕ್ಷದ ಡಿ.ಡಿ ಸಲ್ಲಿಸಬೇಕು. ಪರಿಶಿಷ್ಟರಿಗೆ ಡಿ.ಡಿಯಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗಿದೆ. ಹೀಗೆ ಸಂಗ್ರಹವಾಗುವ ಮೊತ್ತ ಕೆಪಿಸಿಸಿ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ. ಈ ಹಣವನ್ನುಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತು ನೀಡಲು ಬಳಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.