ADVERTISEMENT

ವಿಧಾನಸಭಾ ಚುನಾವಣೆ: ಕೆಆರ್‌ಎಸ್‌ನಿಂದ 50 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 19:45 IST
Last Updated 20 ಡಿಸೆಂಬರ್ 2021, 19:45 IST
ಬಸವನಗುಡಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಲ್.ಜೀವನ್ ಅವರನ್ನು ರವಿ ಕೃಷ್ಣಾರೆಡ್ಡಿ ಹಾಗೂ ಪಕ್ಷದ ಜಂಟಿ ಕಾರ್ಯದರ್ಶಿ ಸೋಮಸುಂದರ್ ಹೂವಿನ ಹಾರ ಹಾಕಿ ಅಭಿನಂದಿಸಿದರು
ಬಸವನಗುಡಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಲ್.ಜೀವನ್ ಅವರನ್ನು ರವಿ ಕೃಷ್ಣಾರೆಡ್ಡಿ ಹಾಗೂ ಪಕ್ಷದ ಜಂಟಿ ಕಾರ್ಯದರ್ಶಿ ಸೋಮಸುಂದರ್ ಹೂವಿನ ಹಾರ ಹಾಕಿ ಅಭಿನಂದಿಸಿದರು   

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್‌ಎಸ್‌) ವಿವಿಧ ಕ್ಷೇತ್ರಗಳಿಗೆ 50 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ‘ಪಕ್ಷದ ಕಚೇರಿಯಲ್ಲಿಡಿಸೆಂಬರ್ 12ರವರೆಗೆ ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದೇವೆ. 123 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 70 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು. ಮೊದಲ ಹಂತದಲ್ಲಿ 50 ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಉಳಿದ ಕ್ಷೇತ್ರಗಳಿಗೆ ಇದೇ ರೀತಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಪಕ್ಷದಲ್ಲಿ ಚುನಾವಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ’ ಎಂದರು.

ADVERTISEMENT

‘ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಕ್ಷಗಳು ಜಾತಿ ಓಲೈಕೆ ಹಾಗೂ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ. ಇದಕ್ಕೆ ಪ್ರತಿಯಾಗಿ ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ಸಕ್ರಿಯರಾಗುವ ಹಾಗೂ ಹಣ, ಮದ್ಯದಂತಹ ಆಮಿಷ ಒಡ್ಡದೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅಭ್ಯರ್ಥಿಗಳನ್ನು ಸಜ್ಜುಗೊಳಿಸುತ್ತೇವೆ. ಇದೇ ಕಾರಣಕ್ಕೆ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ’ ಎಂದೂ ತಿಳಿಸಿದರು.

ಬೆಂಗಳೂರು ಹಾಗೂ ಆಸುಪಾಸಿನ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು: ಆರೋಗ್ಯ ಸ್ವಾಮಿ ಚಿನ್ನಪ್ಪ (ಕ್ಷೇತ್ರ–ಕೆ.ಆರ್.ಪುರ), ಎಲ್.ಜೀವನ್‌ (ಬಸವನಗುಡಿ), ರಘುಪತಿ ಭಟ್‌ (ಜಯನಗರ), ಶಿವನಂಜೇಗೌಡ (ಬೆಂಗಳೂರು ದಕ್ಷಿಣ), ಅನುರಾಜ್‌ (ಆನೇಕಲ್), ಸೊಣ್ಣಪ್ಪ ಗೌಡ (ಹೊಸಕೋಟೆ), ಶಿವಕುಮಾರ್‌ (ರಾಮನಗರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.