ADVERTISEMENT

ವಿರೂಪಾಕ್ಷಪ್ಪ ಲಂಚ ಪ್ರಕರಣ: ಚನ್ನಗಿರಿ ಕ್ಷೇತ್ರದ ‘ಕಮಲ’ ಪಾಳಯದಲ್ಲಿ ತಳಮಳ

ಕಾಂಗ್ರೆಸ್‌ ಉತ್ಸಾಹ ಹೆಚ್ಚಿಸಿದ ಶಾಸಕ ಮಾಡಾಳ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:45 IST
Last Updated 6 ಮಾರ್ಚ್ 2023, 19:45 IST
ಮಾಡಾಳ್‌ ವಿರೂಪಾಕ್ಷಪ್ಪ
ಮಾಡಾಳ್‌ ವಿರೂಪಾಕ್ಷಪ್ಪ   

ದಾವಣಗೆರೆ: ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ‘ಕಮಲ’ವನ್ನು ಅರಳಿಸಬೇಕೆಂಬ ಬಿಜೆಪಿ ನಾಯಕರ ಉತ್ಸಾಹಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಲಂಚದ ಪ್ರಕರಣ ತಣ್ಣೀರೆರಚಿದೆ. ಈ ಪ್ರಕರಣ ಕಾಂಗ್ರೆಸ್‌ ಪಾಳಯದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕೆಎಸ್‌ಡಿಎಲ್‌ ಲಂಚ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವುದರಿಂದ, ವಿರೂಪಾಕ್ಷಪ್ಪ ಅಥವಾ ಅವರ ಪುತ್ರ ಮಲ್ಲಿಕಾರ್ಜುನ್‌ಗೆ ಟಿಕೆಟ್‌ ಸಿಗುವುದು ಕಷ್ಟಸಾಧ್ಯ ಎಂಬಂತಾಗಿದೆ. ಇದರ ಬೆನ್ನಲ್ಲೇ ಪಕ್ಷದ ಟಿಕೆಟ್‌ ಬಯಸಿರುವ ಉಳಿದ ಆಕಾಂಕ್ಷಿಗಳಲ್ಲೂ ಆಸೆ ಗರಿಗೆದರಿದೆ.

ಚುನಾವಣೆ ಹೊಸ್ತಿಲಿನಲ್ಲಿ ‘ಕಮಿಷನ್‌’ ವಿಷಯ ಮುಂದಿಟ್ಟುಕೊಂಡು ವಿರೋಧ ಪಕ್ಷ ಪ್ರತಿಭಟನೆಗೆ ಇಳಿದಿರುವುದು ಬಿಜೆಪಿ ನಾಯಕರಿಗೆ ‘ಬಿಸಿ ತುಪ್ಪ’ವಾಗಿ ಪರಿಣಮಿಸಿದೆ. ಮಾಡಾಳ್‌ ವಿರುದ್ಧ ಆರೋಪ ಕೇಳಿ ಬಂದು ಐದು ದಿನಗಳಾಗಿದ್ದರೂ ಪಕ್ಷದ ವರಿಷ್ಠರು ಇದುವರೆಗೂ ಶಿಸ್ತು ಕ್ರಮ ಕೈಗೊಳ್ಳದಿರುವುದು ಪಕ್ಷದ ಜಿಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ತೀವ್ರ ಮುಜುಗರ ತಂದಿದೆ.

ADVERTISEMENT

ವಿರೂಪಾಕ್ಷಪ್ಪ ಅವರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಬದಲಿಗೆ ಪುತ್ರ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ಕೊಡಿಸಲು ಯತ್ನಿಸುತ್ತಿದ್ದರು. ಇದೀಗ ಇನ್ನೊಬ್ಬ ಪುತ್ರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಮಾಡಾಳ್‌ ಕುಟುಂಬದ ‘ರಾಜಕೀಯ ಭವಿಷ್ಯ’ವೂ ಡೋಲಾಯಮಾನವಾಗಿದೆ.

ಪ್ರಚಾರ ಆರಂಭಿಸಿದ ಶಿವಕುಮಾರ್‌: ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್‌)ದ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಹೆಸರು ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಮುಂಚೂಣಿಗೆ ಬಂದಿದೆ. ಮೂರು ದಿನಗಳಿಂದ ಅವರು ಕ್ಷೇತ್ರದಲ್ಲಿ ಸದ್ದಿಲ್ಲದೇ ಪ್ರಚಾರ ನಡೆಸುತ್ತಿದ್ದಾರೆ.

2013ರಲ್ಲಿ ವಿರೂಪಾಕ್ಷಪ್ಪ ಕೆಜೆಪಿಯಿಂದ ಸ್ಪರ್ಧಿಸಿದ್ದಾಗ ಶಿವಕುಮಾರ್‌ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗ ಕಾಂಗ್ರೆಸ್‌ನ ವಡ್ನಾಳ್‌ ರಾಜಣ್ಣ ಗೆಲುವಿನ ನಗೆ ಬೀರಿದ್ದರು. 10 ವರ್ಷ ಅಧ್ಯಕ್ಷರಾಗಿ ‘ತುಮ್ಕೋಸ್‌’ ಸಂಸ್ಥೆಯನ್ನು ಬೆಳೆಸಿರುವ ಶಿವಕುಮಾರ್‌ 40 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.

ಕೆಲ ತಿಂಗಳ ಹಿಂದೆ ಬಿಜೆಪಿಗೆ ಸೇರಿದ್ದ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಅವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ಗೆ ಯತ್ನಿಸುತ್ತಿದ್ದರು. ಇದೀಗ ಅವರೂ ತಮ್ಮ ಮೂಲವಾದ ಚನ್ನಗಿರಿಯ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

‘ಮಾಡಾಳ್‌ ಪ್ರಕರಣವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಂಗಳವಾರ ದಾವಣಗೆರೆಗೆ ಬಂದು ಪಕ್ಷದ ಮುಖಂಡರ ಜೊತೆಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಚನ್ನಗಿರಿ ಕ್ಷೇತ್ರದ
ಬಗ್ಗೆಯೂ ಚರ್ಚೆ ನಡೆಯಬಹುದು. ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ಬಗ್ಗೆ ಪಕ್ಷದ ಕೇಂದ್ರ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಸಂಚಲನ
ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಲಂಚದ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿದೆ. ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಸಹ ಪುತ್ರರಾದ ಜಗದೀಶ ಅಥವಾ ಅಶೋಕ ಅವರಿಗೆ ಟಿಕೆಟ್‌ ಕೋರುತ್ತಿದ್ದಾರೆ. ಇನ್ನೊಂದೆಡೆ ಪಕ್ಷದ ಮುಖಂಡರಾದ ತೇಜಸ್ವಿ ಪಟೇಲ್‌, ಹೊದಿಗೆರೆ ರಮೇಶ್‌, ಶಿವಗಂಗಾ ಬಸವರಾಜ್‌ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮಾಡಾಳ್‌ ಪರ ಬಿಜೆಪಿ ಸಭೆ
ಸೋಮವಾರ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪರವಾಗಿ ಚನ್ನಗಿರಿಯಲ್ಲಿ ಸಭೆ ನಡೆಸಿ ಬೆಂಬಲ ಸೂಚಿಸಿರುವ ಬಿಜೆಪಿ ಕಾರ್ಯಕರ್ತರು, ‘ಚುನಾವಣೆ ಹೊಸ್ತಿಲಲ್ಲಿ ವಿರೂಪಾಕ್ಷಪ್ಪ ವಿರುದ್ಧ ಷಡ್ಯಂತ್ರ ರೂಪಿಸಿ ಲಂಚದ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ’ ಎಂದು ಪ್ರತಿಪಾದಿಸಿದರು.

‘ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಬಿಜೆಪಿ ತಾಲ್ಲೂಕು ಸಮಿತಿ ಅವರ ಪರ ನಿಷ್ಠೆಯಿಂದ ಕಾರ್ಯನಿರ್ವಹಿಸಲಿದೆ. ಈ ಪ್ರಕರಣದಲ್ಲಿ ಮಾಡಾಳ್‌ಗೆ ಗೆಲುವಾಗಲಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ. ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.

*
ವರಿಷ್ಠರ ಸೂಚನೆಯಂತೆ ಹಳ್ಳಿಗಳಿಗೆ ತೆರಳಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಕಾರ್ಯಕರ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ.
–ಎಚ್‌.ಎಸ್‌. ಶಿವಕುಮಾರ್‌, ತುಮ್ಕೋಸ್‌ ಮಾಜಿ ಅಧ್ಯಕ್ಷ

*
ಚನ್ನಗಿರಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅಭ್ಯರ್ಥಿಯ ಆಯ್ಕೆಯ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.
–ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.