ADVERTISEMENT

ಸಚಿವ ಸುಧಾಕರ್ ಹಂಚಿದ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2023, 10:16 IST
Last Updated 19 ಏಪ್ರಿಲ್ 2023, 10:16 IST
ಗ್ಯಾಸ್ ಸ್ಟೌ ಸಿಡಿದಿರುವುದು
ಗ್ಯಾಸ್ ಸ್ಟೌ ಸಿಡಿದಿರುವುದು    

ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ‌ಸಚಿವ ಡಾ.ಕೆ. ಸುಧಾಕರ್ ಅವರು ಹಂಚಿರುವ ಕಳಪೆ ಸ್ಟೌಗಳು ಸ್ಫೋಟಗೊಳ್ಳುತ್ತಿವೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಪ್ರಜಾವಾಣಿ ಲೇಖನ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತದಾರರ ಓಲೈಕೆಗಾಗಿ ಬಿಜೆಪಿಗರು ನೀಡುವ ಆಮಿಷದ ಉಡುಗೊರೆಗಳೂ ಕೂಡ ಬಿಜೆಪಿ ಅಡಳಿತದಂತೆ ಕಳಪೆಯಾಗಿರುತ್ತವೆ’ ಎಂದು ಕಿಡಿಕಾರಿದೆ.

‘ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಿದ ಕಳಪೆ ಗ್ಯಾಸ್ ಸ್ಟೌಗಳು ಸ್ಫೋಟಗೊಳ್ಳುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸಚಿವ ಸುಧಾಕರ್ ಅವರಿಗೆ ಕೋವಿಡ್ ಕಾಲದಿಂದಲೂ ಅಭ್ಯಾಸವಾಗಿದೆ. ಸುಧಾಕರ್ ಅವರೇ ಜೀವ ಹೋದರೆ ಹೊಣೆ ಯಾರು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಿದ್ದ ಗ್ಯಾಸ್ ಸ್ಟೌ ಮಂಗಳವಾರ ತಾಲ್ಲೂಕಿನ ಪುರ ಗ್ರಾಮದಲ್ಲಿ ಸಿಡಿದಿದೆ.

ಮಹಿಳಾ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚುನಾವಣೆ ಘೋಷಣೆಗೂ ಮುನ್ನವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮನೆ, ಮನೆಗೂ ಗ್ಯಾಸ್‌ ಸ್ಟೌ ಹಂಚಲಾಗಿತ್ತು.

ಪುರ ಗ್ರಾಮದ ವೆಂಕಟೇಶ್ ಎಂಬುವರ ಪತ್ನಿ ಸ್ಟೌ ಮೇಲೆ ಬೇಳೆ ಬೇಯಿಸಲು ಇಟ್ಟು ಹೊರಗಡೆ ಕೆಲಸದಲ್ಲಿ ನಿರತರಾಗಿದ್ದರು. ಕೆಲ ಸಮಯದ ಬಳಿಕ ಅಡುಗೆ ಮನೆಯಿಂದ ಸ್ಫೋಟದ ಸದ್ದು ಕೇಳಿದೆ. ಒಳಹೋಗಿ ನೋಡಿದಾಗಿ ಸ್ಟೌ ಸಿಡಿದು ಛಿದ್ರಗೊಂಡಿತ್ತು. ಅದರ ಮೇಲೆ ಇಟ್ಟಿದ್ದ ಕುಕ್ಕರ್ ಕೆಳಗೆ ಬಿದ್ದಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

‘ನೀವು ಕೊಟ್ಟ ಉಡುಗೊರೆಯಾಗಿ ಕಳಪೆ ಸ್ಟೌನಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಜವಾಬ್ದಾರಿ’ ಎಂದು ವೆಂಕಟೇಶ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಟೌ ಸ್ಫೋಟಗೊಂಡ ಬಳಿಕ ಅದರ ಚಿತ್ರ ‌ಮತ್ತು‌ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಕ್ಷಣ ಪಕ್ಷದ ಸ್ಥಳೀಯ ಮುಖಂಡರು ಮತ್ತು ಅಭ್ಯರ್ಥಿಯ ಫೌಂಡೇಶನ್ ಕಡೆಯುವರು ಸ್ಫೋಟವಾಗಿದ್ದ ಸ್ಟೌ ಕೊಂಡೊಯ್ದಿದ್ದಾರೆ.

‌ಈ ಘಟನೆಯ ನಂತರ ಭಯ ಗೊಂಡಿರುವ ಗ್ರಾಮದ ಮಹಿಳೆಯರು ತಮ್ಮ ಮನೆಗಳಿಗೂ ಉಡುಗೊರೆಯಾಗಿ ನೀಡಿದ್ದ ಸ್ಟೌ ಬಳಕೆಗೆ ಹಿಂಜರಿಯುತ್ತಿದ್ದಾರೆ. ಕಳಪೆ ಗುಣಮಟ್ಟದ ಸ್ಟೌ ಕೊಟ್ಟ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆಯೂ ಇದೇ ಅಭ್ಯರ್ಥಿ ನೀಡಿದ್ದ ಸ್ಟೌ ಸಿಡಿದು ಮಹಿಳೆಯ ಕೈ ಸುಟ್ಟಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.