ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಮತ್ತು ಸದಸ್ಯರ ಒಟ್ಟು ಸಂಖ್ಯೆಯನ್ನು ಈಗಿರುವ 14ರಿಂದ 8ಕ್ಕೆ ಇಳಿಸುವಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದ್ದರೆ, ರಾಜ್ಯ ಸರ್ಕಾರ ಈ ಸಂಖ್ಯೆಯನ್ನು ಸದ್ದಿಲ್ಲದೆ 16ಕ್ಕೆ ಏರಿಸಿದೆ!
ಕೆಪಿಎಸ್‌ಸಿ ಒಟ್ಟು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ‘ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ನಿಯಂತ್ರಣಗಳು– 1957’ಕ್ಕೆ ತಿದ್ದುಪಡಿ ಮಾಡಿ ಮಾರ್ಚ್ 15ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಷ್ಟೇ ಅಲ್ಲ, ಈ ತಿದ್ದುಪಡಿಯ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಶಿಫಾರಸಿನಂತೆ ಮಾರ್ಚ್ 16ರಂದು ಹಾವೇರಿಯ ಶಕುಂತಲಾ ಎಸ್. ದುಂಡಿಗೌಡರ್ ಎಂಬುವರನ್ನು ಅಧಿಕಾರೇತರ ವರ್ಗದಿಂದ ಸದಸ್ಯರನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.
‘ಶಕುಂತಲಾ ಎಸ್. ದುಂಡಿಗೌಡರ್ ಅವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿನೇಮಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಫೆ. 27ರಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಟಿಪ್ಪಣಿ ಕಳುಹಿಸಿದ್ದರು. ಆದರೆ, ಅಧಿಕಾರೇತರ ಸದಸ್ಯ ಸ್ಥಾನ ಖಾಲಿ ಇಲ್ಲದೇ ಇದ್ದುದರಿಂದ ಅವರ ನೇಮಕಾತಿಗೆ ಅವಕಾಶ ಇರಲಿಲ್ಲ. ಹೀಗಾಗಿ, ತಿದ್ದುಪಡಿ ಮೂಲಕ ಅಧಿಕಾರೇತರ ಸಂಖ್ಯೆಯನ್ನು ಹೆಚ್ಚಿಸಿ ಅವಕಾಶ ಕಲ್ಪಿಸಲಾಗಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಸಂವಿಧಾನದ ಪರಿಚ್ಛೇದ 318ರಲ್ಲಿ ಆಯೋಗದ ಸದಸ್ಯರ ಸಂಖ್ಯೆ ಮತ್ತು ಸಿಬ್ಬಂದಿಯ ಸೇವಾ ಷರತ್ತುಗಳನ್ನು ರಾಜ್ಯಪಾಲರು ನಿಯಮಗಳ ಮೂಲಕ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ, ನಿಯಮ 3ರಲ್ಲಿ ಸದಸ್ಯರ ಸಂಖ್ಯೆ 13 ಎಂದಿರುವುದನ್ನು 15 ಎಂದು ತಿದ್ದುಪಡಿ ಮಾಡಲಾಗಿದೆ.
ಆಡಳಿತ ಸುಧಾರಣಾ ಆಯೋಗ ಫೆ. 3ರಂದು ಮುಖ್ಯಮಂತ್ರಿಗೆ ಸಲ್ಲಿಸಿದ್ದ ವರದಿಯಲ್ಲಿ ಕೆಪಿಎಸ್‌ಸಿ ಸದಸ್ಯರ ಸಂಖ್ಯೆಯನ್ನು ಇಳಿಸುವಂತೆ ಶಿಫಾರಸು ಮಾಡಿತ್ತು. ‘ಉತ್ತರ ಪ್ರದೇಶವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇದೆ. ಹೀಗಾಗಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರೂ ಸೇರಿ ಒಟ್ಟು ಸದಸ್ಯರ ಸಂಖ್ಯೆಯನ್ನು ಇಳಿಸಬಹುದು’ ಎಂದೂ ಸಮರ್ಥನೆ ನೀಡಿತ್ತು.
ಆದರೆ, ಈ ಶಿಫಾರಸು ಮಾಡಿದ ಒಂದು ತಿಂಗಳ ಬಳಿಕ, ಅಂದರೆ ಮಾರ್ಚ್ 3ರಂದು ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ಟಿಪ್ಪಣಿಯಲ್ಲಿ, ಪ್ರಸ್ತುತ 13 ಸದಸ್ಯರ (ಅಧ್ಯಕ್ಷರೂ ಸೇರಿ 14) ಸಂಖ್ಯೆಯನ್ನು 15ಕ್ಕೆ (ಅಧ್ಯಕ್ಷರೂ ಸೇರಿ 16) ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.
ವಿಶೇಷವೆಂದರೆ, ಸದಸ್ಯರ ಸಂಖ್ಯೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿರುವ ವಿಷಯ ಆಯೋಗದಲ್ಲಿರುವ ಸದಸ್ಯರ ಗಮನಕ್ಕೇ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿ ಹಾಲಿ ಸದಸ್ಯರೊಬ್ಬರು, ‘ಒಟ್ಟು ಸದಸ್ಯರಲ್ಲಿ ಶೇ 50ರಷ್ಟು ಸದಸ್ಯರು ಅಧಿಕಾರಿ ವರ್ಗದಿಂದ (ಕನಿಷ್ಠ 10 ವರ್ಷ ಸರ್ಕಾರಿ ಸೇವೆ ಸಲ್ಲಿಸಿರಬೇಕು) ಮತ್ತು ಶೇ 50ರಷ್ಟು ಅಧಿಕಾರೇತರ ವರ್ಗದ ಸದಸ್ಯರಿರಬೇಕು ಎಂಬ ನಿಯಮವಿದೆ. ಸದಸ್ಯರಾಗಿದ್ದ ಚಂದ್ರಕಾಂತ ಡಿ. ಶಿವಕೇರಿ ಮಾರ್ಚ್ 8ರಂದು ನಿವೃತ್ತರಾಗಿದ್ದಾರೆ. ಸದ್ಯ ಅಧ್ಯಕ್ಷರು ಮತ್ತು 12 ಸದಸ್ಯರಿದ್ದಾರೆ. ಸದಸ್ಯರ ಪೈಕಿ, ಪ್ರೊ. ರಂಗರಾಜ ವನದುರ್ಗ ಅವರು ಅನಾರೋಗ್ಯ ಕಾರಣದಿಂದ ಹಲವು ತಿಂಗಳುಗಳಿಂದ ಗೈರಾಗಿದ್ದಾರೆ’ ಎಂದರು.
ಎರಡನೇ ಬಾರಿ ತಿದ್ದುಪಡಿ
ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಕುರಿತಂತೆ 1957ರ ಡಿ. 12ರಂದು ಹೊರಡಿಸಿದ್ದ ‘ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ನಿಯಂತ್ರಣಗಳು– 1957‘ ಅಧಿಸೂಚನೆಯ ನಿಯಮ 3ರಲ್ಲಿ ಆಯೋಗದ ಅಧ್ಯಕ್ಷರು ಹಾಗೂ ಇತರ 9 ಸದಸ್ಯರನ್ನು (ಒಟ್ಟು 10 ಒಳಗೊಂಡಿರುತ್ತದೆ ಎಂದು ನಮೂದಿಸಲಾಗಿದೆ. 2014ರ ಜುಲೈ16ರಂದು ಅದನ್ನು ತಿದ್ದುಪಡಿ ಮಾಡಿ ಸದಸ್ಯರ ಸಂಖ್ಯೆಯನ್ನು 13ಕ್ಕೆ (ಅಧ್ಯಕ್ಷರು ಸೇರಿ 14) ಹೆಚ್ಚಿಸಲಾಗಿತ್ತು. ಇದೀಗ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.