ADVERTISEMENT

ಮತ ಭದ್ರಪಡಿಸಲು ಮತದಾರರಿಗೆ ಆಮಿಷ | ಆಹಾರ ಧಾನ್ಯ ಅಕ್ರಮ ದಾಸ್ತಾನು: ಪ್ರಕರಣ ದಾಖಲು

ಚೀಲಗಳ ಮೇಲೆ ಶಾಸಕಿ ರೂಪಕಲಾ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 19:31 IST
Last Updated 10 ಮಾರ್ಚ್ 2023, 19:31 IST
ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ ವೇಳೆ ಸಿಕ್ಕಿದ ಆಹಾರ ಧಾನ್ಯದ ಚೀಲಗಳು
ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ ವೇಳೆ ಸಿಕ್ಕಿದ ಆಹಾರ ಧಾನ್ಯದ ಚೀಲಗಳು   

ರಾಜ್ಯ ವಿಧಾನಸಭೆಗೆ ಇನ್ನೇನು ಚುನಾವಣೆ ಘೋಷಣೆ ಆಗಲಿದೆ. ವಿವಿಧ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಮತದಾರರ ಸೆಳೆಯಲು ಹಲವು ಬಗೆಯ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಹಳೆ ಮೈಸೂರು ಭಾಗದ ಹಲವೆಡೆ ಬಾಡೂಟ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಜತೆಗೆ ಕುಣಿಗಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಹಿಳಾ ಮತದಾರರ ಸೆಳೆಯಲು ಬಾಗಿನದ ಮೊರೆ ಹೋಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ನಿವೇಶನಗಳ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

**

ಕೋಲಾರ: ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸರು ಗುರುವಾರ ರಾತ್ರಿ ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ದಾಳಿ ನಡೆಸಿದ್ದು, ಕೆಜಿಎಫ್‌ ಶಾಸಕಿ ರೂಪಕಲಾ ಎಂ. ಶಶಿಧರ್‌ ಅವರ ಭಾವಚಿತ್ರಗಳಿದ್ದ ಅಕ್ಕಿ, ಬೇಳೆ, ಬೆಲ್ಲ, ಮೈದಾ ಹಿಟ್ಟು ತುಂಬಿದ್ದ ಸಾವಿರಾರು ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಗ್ರಾಮದ ಶ್ರೀನಾಥ್‌ ಎಂಬುವರಿಗೆ ಸೇರಿದ ತೋಟದ ಮನೆ ಇದಾಗಿದೆ. ಪ್ರತಿ ಚೀಲದಲ್ಲಿ 4 ಕೆ.ಜಿ ಅಕ್ಕಿ, 1 ಕೆ.ಜಿ ಬೆಲ್ಲ, 900 ಗ್ರಾಂ ತೊಗರಿಬೇಳೆ, 900 ಗ್ರಾಂ ಕಡಲೆಬೇಳೆ, 1 ಕೆ.ಜಿ ಮೈದಾ ಹಿಟ್ಟು ತುಂಬಿಡಲಾಗಿತ್ತು. ಇಂಥ 3,066 ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, 212 ಕ್ವಿಂಟಲ್‌ ತೊಗರಿಬೇಳೆ, 95.60 ಕ್ವಿಂಟಲ್‌ ಬೆಲ್ಲ, 151 ಕ್ವಿಂಟಲ್‌ ಮೈದಾ, 252 ಕ್ವಿಂಟಲ್‌ ಅಕ್ಕಿ ಚೀಲಗಳನ್ನು ಮನೆ, ಶೆಡ್‌ ಹಾಗೂ ಅಂಗಳದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಇದು ಸುಮಾರು ₹50 ಲಕ್ಷ ಮೌಲ್ಯ ಇರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಬ್ಯಾಲಹಳ್ಳಿ ಗ್ರಾಮದ ಶ್ರೀನಾಥ್‌, ಶಾಸಕಿ ರೂಪಕಲಾ ಶಶಿಧರ್‌ ಹಾಗೂ ದಾಸ್ತಾನು ಇರಿಸಿದ್ದ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ಕ್ಷೇತ್ರದ ಜನರಿಗೆ ವಿತರಿಸಲು ಶೇಖರಿಸಿಟ್ಟಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಪ್ರತಿ ಚೀಲದ ಮೇಲೆ ‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಬರೆದಿದ್ದು ರೂಪಕಲಾ ಕೈಮುಗಿದಿರುವ ಚಿತ್ರವಿದೆ.

‘ಜಿಲ್ಲಾಧಿಕಾರಿಗೆ ಬಂದ ಖಚಿತ ದೂರು ಆಧರಿಸಿ, ಅವರ ನಿರ್ದೇಶನದಂತೆ ರಾತ್ರಿ ದಾಳಿ ನಡೆಸಲಾಗಿದೆ. ಪ್ರಕರಣ ದಾಖಲಿಸಿದ್ದು, ತನಿಖೆ ವೇಳೆ ಸಂಬಂಧಪಟ್ಟವರು ದಾಖಲೆ ತೋರಿಸಬೇಕಾಗುತ್ತದೆ’ ಎಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕಿ ಶ್ರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ ಪೊಲೀಸ್‌ ವರಿಷ್ಠಾಧಿಕಾರಿ ಎಂ. ನಾರಾಯಣ ಮಾರ್ಗದರ್ಶನದಲ್ಲಿ ಗ್ರಾಮಾಂತರ ಆಹಾರ ನಿರೀಕ್ಷಕ ಗೋವಿಂದಪ್ಪ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಜೆ. ಲೋಕೇಶ್‌, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

*
ಯುಗಾದಿಗಾಗಿ ಜನರಿಗೆ ಆಹಾರದ ಕಿಟ್‌ ನೀಡಲು ಸಂಗ್ರಹಿಸಿಟ್ಟಿದ್ದೆವು. ಹೆಂಗಸರಿಗೆ ಅನುಕೂಲವಾಗುತ್ತದೆ ಎಂದುಕೊಂಡಿದ್ದೆ. ಪ್ರತಿ ಕುಟುಂಬಕ್ಕೂ ಕಿಟ್‌ ಕೊಡಲು ಪ್ರಯತ್ನಿಸಿದ್ದೇನೆ. ಹೆಂಗಸರು ನನ್ನನ್ನು ಕಾಪಾಡುತ್ತಾರೆ.
–ರೂಪಕಲಾ ಶಶಿಧರ್‌, ಶಾಸಕಿ, ಕೆಜಿಎಫ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.