ADVERTISEMENT

ಪಿಎಫ್‌ಐ ಗೂಂಡಾಗಳನ್ನು ಬಿಟ್ಟು, ಅಶಾಂತಿ ಸೃಷ್ಟಿಸಿದ್ದು ಸಿದ್ದರಾಮಯ್ಯ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2023, 10:59 IST
Last Updated 5 ಫೆಬ್ರುವರಿ 2023, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಅಶಾಂತಿಯ ರಾಜ್ಯವನ್ನಾಗಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು’ ಎಂದು ಬಿಜೆಪಿ ದೂರಿದೆ.

ಪಿಎಫ್‌ಐ ಕಾರ್ಯಕರ್ತರು ಬಿಡುಗಡೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘175 ಮಂದಿ ಪಿಎಫ್‌ಐ ಗೂಂಡಾಗಳನ್ನು ಬೀದಿಗೆ ಬಿಟ್ಟು ಕೋಮುಗಲಭೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸಿದ್ದು. 2013-2018ರ ವರೆಗಿನ ಕಾಂಗ್ರೆಸ್‌ ಸರ್ಕಾರದ ಆ ಐದು ವರ್ಷಗಳ ಅವಧಿ ನಿಜಕ್ಕೂ ಕರಾಳ’ ಎಂದು ಟೀಕಿಸಿದೆ.

‘ಕಾಂಗ್ರೆಸ್ ಸರ್ಕಾರವು ಹಿಜಾಬ್ ಕುರಿತಂತೆ ಅತೀವ ಕಾಳಜಿ‌ ಹೊಂದಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವುದಾಗಿ ಗ್ಯಾರಂಟಿ’ ಎಂದು ಬಿಜೆಪಿ ಗುಡುಗಿದೆ.

ADVERTISEMENT

‘ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯ. ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಅದಕ್ಕಾಗಿ ರೂಪಿಸಿದ ₹2100 ಕೋಟಿ ಯೋಜನೆಯೇ ಹೆಬ್ಬಾಳದವರೆಗಿನ 6.9 ಕಿಮೀ ಉದ್ದದ ಉಕ್ಕಿನ ಮೇಲ್ಸೆತುವೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

ಈಗ ನಮ್ಮ ಸರ್ಕಾರ ಜನರ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯ ಒದಗಿಸುತ್ತಾ ಬಂದಿದೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಈ ಕೆಲಸ ಮಾಡಿದ್ದಿದ್ದರೆ ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಮ್ಮ ಸರ್ಕಾರ ನಿರ್ಮಿಸುವ ಅಗತ್ಯವೇ ಇರಲಿಲ್ಲ. ಇಂತಹ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು ಎಂದು ಬಿಜೆಪಿ ಹೇಳಿದೆ.

‘ಅಧಿಕಾರದಲ್ಲಿದ್ದಾಗ ಮಾಡುವುದಿಲ್ಲ, ಬೇರೆಯವರು ಮಾಡಿದಾಗ ಸಹಿಸದಿರುವುದು ಎಂಬುದು ಕಾಂಗ್ರೆಸ್‌ ನಾಯಕರ ಜಾಯಮಾನ, ಸಿದ್ದರಾಮಯ್ಯ ಅವರೇ, ಇದು ಗೊತ್ತಿದ್ದೂ ಸುಳ್ಳು ಆರೋಪ ಮಾಡುವ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ. ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ’ ಎಂದು ಬಿಜೆಪಿ ಕಾಲೆಳೆದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 75 ವರ್ಷಗಳ ಕಾಲ ಕುಟುಂಬ ರಾಜಕೀಯ ಮಾಡಿ, ದೇಶದಲ್ಲಿ ಅಪ್ರಸ್ತುತವಾಗಿರುವ ಕಾಂಗ್ರೆಸ್‌ಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.