ADVERTISEMENT

ಟಿಕೆಟ್‌ ಹಂಚಿಕೆಗೆ ಮಾನದಂಡ ರೂಪಿಸಿದ ಬಿಜೆಪಿ: ಅಭ್ಯರ್ಥಿ ಆಯ್ಕೆಗೆ ಸಮೀಕ್ಷೆ

3 ತಂಡಗಳಿಂದ ಅಭ್ಯರ್ಥಿ ಆಯ್ಕೆಗೆ ಸಮೀಕ್ಷೆ

ಸಿದ್ದಯ್ಯ ಹಿರೇಮಠ
Published 8 ಏಪ್ರಿಲ್ 2022, 20:40 IST
Last Updated 8 ಏಪ್ರಿಲ್ 2022, 20:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಒಂದು ವರ್ಷ ಬಾಕಿ ಇರುವಂತೆಯೇ ಕರ್ನಾಟಕದ ವಿಧಾನಸಭೆ ಚುನಾವಣೆಯ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ಪ್ರತಿ ಕ್ಷೇತ್ರದಲ್ಲಿ ಸಮೀಕ್ಷೆ ಕಾರ್ಯ ನಡೆಸುವ ನಿಟ್ಟಿನಲ್ಲಿ ಕೇಂದ್ರ ಮುಖಂಡರ ಮುಂದಾಳತ್ವದ 3 ತಂಡಗಳನ್ನು ರಚಿಸಲು ನಿರ್ಧರಿಸಿದೆ.

ಈ ತಂಡಗಳು ಆಯಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಮೀಕ್ಷೆ ಕೈಗೊಳ್ಳಲಿವೆ. ಪ್ರತಿ ತಂಡವು ಒಂಭತ್ತು ಜನ ರಾಜ್ಯ ಮುಖಂಡರನ್ನು ಒಳಗೊಳ್ಳಲಿದ್ದು, ಉಸ್ತುವಾರಿಗೆ ಒಬ್ಬ ಕೇಂದ್ರ ನಾಯಕರನ್ನು ನೇಮಿಸಲಾಗುತ್ತಿದೆ.

ಏಪ್ರಿಲ್‌ 16 ಮತ್ತು 17ರಂದು ಹೊಸಪೇಟೆಯಲ್ಲಿ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯ ಸಂದರ್ಭ ಪ್ರತಿ ತಂಡದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್‌ 21ರಿಂದ ಈ ತಂಡಗಳು ಸಮೀಕ್ಷೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿವೆ.

ADVERTISEMENT

ಹಾಲಿ ಶಾಸಕರ ಕಾರ್ಯವೈಖರಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವ ವಿವರ ಹಾಗೂ ಜನಪ್ರಿಯತೆಯನ್ನೇ ಮುಂದಿನ ಚುನಾವಣೆಯ ಟಿಕೆಟ್‌ ಹಂಚಿಕೆಗೆ ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ.

ಸಚಿವ ಸ್ಥಾನದಲ್ಲಿ ಇರುವವರ ಕೆಲಸ– ಕಾರ್ಯಗಳನ್ನೂ ಸಮೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಶಾಸಕರಾಗಿ ಅವರು ಪ್ರತಿನಿಧಿಸುವ ಕ್ಷೇತ್ರ ಮಾತ್ರಲ್ಲದೆ, ಅವರು ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಸುಧಾರಣೆ, ಬದಲಾವಣೆ ತರಲು ಕೈಗೊಂಡ ಕ್ರಮಗಳೇನು ಎಂಬುದನ್ನು ಒರೆಗೆ ಹಚ್ಚಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿಷ್ಕ್ರಿಯ, ನಿರ್ಲಿಪ್ತ, ಭ್ರಷ್ಟ ಹಾಗೂ ಜನಸಾಮಾನ್ಯರಿಗೆ ಸ್ಪಂದಿಸದ ಶಾಸಕರ ಬದಲಿಗೆ, ಯುವಜನತೆಗೆ ಟಿಕೆಟ್‌ ನೀಡುವ ಕುರಿತೂ ಪಕ್ಷ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಸಮಾಲೋಚನೆಗೆ ವೇಳಾಪಟ್ಟಿ:ಏಪ್ರಿಲ್‌ 21ರಿಂದ ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ಸಂಸದರು, ಪಕ್ಷದಲ್ಲಿ ಸಕ್ರಿಯವಾಗಿರುವ ಯುವ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆ ನಡೆಸಬೇಕು ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ.

ಪಕ್ಷ ಸಂಘಟನೆಗಾಗಿ ಪ್ರತಿಯೊಬ್ಬರೂ ಶ್ರಮಿಸಲೇಬೇಕು ಎಂಬ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಘಟಕದ ಸಹಕಾರದೊಂದಿಗೆ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಆ ವೇಳಾಪಟ್ಟಿಯ ಅನ್ವಯ ಪ್ರತಿಯೊಬ್ಬ ಮುಖಂಡರೂ ಕ್ಷೇತ್ರವ್ಯಾಪ್ತಿಯಲ್ಲಿ ಸಂಚರಿಸಲೇಬೇಕು ಎಂಬ ಸೂಚನೆ ನೀಡಲಾಗಿದೆ.

ಹಿರಿಯರಿಗೆ ಕೊಕ್‌?:ಈಗಾಗಲೇ 65ರಿಂದ 70 ವರ್ಷ ವಯಸ್ಸು ದಾಟಿರುವ ಬಿಜೆಪಿಯ ಅನೇಕ ಹಿರಿಯ ಶಾಸಕರು ಹಾಗೂ ಕಳೆದ ಬಾರಿಯ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಸಾಧ್ಯತೆಗಳು ಇಲ್ಲ. ಈಗಾಗಲೇ ಅಂಥ ಅನೇಕ ಮುಖಂಡರಿಗೆ ಪಕ್ಷವು ಈ ಸಂಬಂಧ ಸ್ಪಷ್ಟ ಸೂಚನೆ ನೀಡಿದೆ.

ವಯಸ್ಸಾದವರು ತಮ್ಮ ಬದಲಿಗೆ ಮಕ್ಕಳಿಗೆ ಅಥವಾ ಹತ್ತಿರದ ಸಂಬಂಧಿಗಳಿಗೆ ಟಿಕೆಟ್‌ ಕೊಡುವಂತೆ ದುಂಬಾಲು ಬೀಳುವಂತಿಲ್ಲ. ಟಿಕೆಟ್‌ ದೊರೆಯಲಿಲ್ಲ ಎಂಬ ಕಾರಣ ಮುಂದಿರಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯಲೂಬಾರದು. ಪಕ್ಷ ಟಿಕೆಟ್‌ ನೀಡುವ ಅಭ್ಯರ್ಥಿಗೆ ಬೆಂಬಲವಾಗಿ ನಿಲ್ಲಬೇಕು ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡಲಾಗಿದೆ. ಇಂಥ ಬೆಳವಣಿಗೆ ಅನೇಕರಿಗೆ ಇರುಸುಮುರುಸು ಉಂಟು ಮಾಡಿದೆ.ಘಟಾನುಘಟಿ ಎಂದು ಭಾವಿಸಿರುವ ಅನೇಕರು ಟಿಕೆಟ್‌ನಿಂದ ವಂಚಿತರಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ ಎಂದೂ ಪಕ್ಷದ ಪ್ರಮುಖ ಮುಖಂಡರೊಬ್ಬರು ತಿಳಿಸಿದ್ದಾರೆ.

ಪ್ರಮುಖವಾಗಿ ಪಕ್ಷದ ವರಿಷ್ಠರು ‘ಕುಟುಂಬ ರಾಜಕಾರಣ’ಕ್ಕೆ ಆದ್ಯತೆ ನೀಡದಿರಲು ತೀರ್ಮಾನಿಸಿದ್ದಾರೆ. ಇದರಿಂದಾಗಿ, ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಮಕ್ಕಳ ರಾಜಕೀಯ ಹಾದಿಯನ್ನು ಸುಗಮಗೊಳಿಸಬೇಕು ಎಂಬ ಇರಾದೆ ಹೊಂದಿರುವ ಮುಖಂಡರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.