ADVERTISEMENT

ಟಿಕೆಟ್‌ಗಾಗಿ ಜಿದ್ದಾಜಿದ್ದಿ, ‘ಕೈ’ ಕಗ್ಗಂಟು: ಆಕಾಂಕ್ಷಿಗಳೊಂದಿಗೆ ನಾಯಕರ ಮಾತುಕತೆ

50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಗೆಹರಿಯದ ಗೊಂದಲ l

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:41 IST
Last Updated 16 ಮಾರ್ಚ್ 2023, 23:41 IST
.
.   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಅಭಿಯಾನ ಮತ್ತು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ವಿಚಾರದಲ್ಲಿ ಮುಂದಿರುವ ಕಾಂಗ್ರೆಸ್‌ ನಾಯಕರಿಗೆ, ಅನೇಕ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಜಿದ್ದಿಗೆ ಬಿದ್ದಿರುವುದು ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.

ಟಿಕೆಟ್‌ಗಾಗಿ ಪೈಪೋಟಿಗಿಳಿದಿರುವ ಆಕಾಂಕ್ಷಿಗಳ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೂ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೊಂದಲ ಬಗೆಹರಿದಿಲ್ಲ. ಆಕಾಂಕ್ಷಿಗಳು ತಾವೇ ಅಭ್ಯರ್ಥಿಯ ಎಂದು ಬಿಂಬಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಂಡಾಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು ಎಂಬ ಬಗ್ಗೆ ಕಾಂಗ್ರೆಸ್‌ ನಾಯಕರ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಹಾಲಿ ಶಾಸಕರಿರುವ ಕ್ಷೇತ್ರಗಳೂ ಸೇರಿ ಎಲ್ಲ 224 ಕ್ಷೇತ್ರಗಳಿಗೆ ಟಿಕೆಟ್‌ ಆಕಾಂಕ್ಷಿಗಳಿಂದ ಕೆಪಿಸಿಸಿ ಅರ್ಜಿ ಆಹ್ವಾನಿಸಿತ್ತು. ಹಣ ನೀಡಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಪೈಕಿ ಅನೇಕರು, ತಮ್ಮ ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದರು. ಟಿಕೆಟ್‌ ಘೋಷಣೆಗೂ ಮೊದಲೇ ಪ್ರಚಾರ ನಡೆಸದಂತೆ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದರೂ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಅಷ್ಟೇ ಅಲ್ಲ, ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗುವುದು ಎಂದು ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡಿದ ಬಳಿಕವೂ, ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿಯೂ ಆಕಾಂಕ್ಷಿಗಳು ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ, ಚುನಾವಣಾ ಸಮಿತಿ 120 ಕ್ಷೇತ್ರಗಳಿಗೆ ಒಬ್ಬ ಸಂಭವನೀಯ ಅಭ್ಯರ್ಥಿ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದೆ.

ADVERTISEMENT

ಇದೀಗ, ಟಿಕೆಟ್‌ಗಾಗಿ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಒಬ್ಬರ ಹೆಸರನ್ನು ಮುಂಚೂಣಿಗೆ ತಂದು, ಇತರ ಆಕಾಂಕ್ಷಿಗಳನ್ನು ಮಾತುಕತೆ ಮೂಲಕ ಮನವೊಲಿಸುವ ಕೆಲಸವನ್ನು ರಾಜ್ಯ ನಾಯಕರು ಮಾಡುತ್ತಿದ್ದಾರೆ.

ಕೆಲವು ಶಾಸಕರ ಕೈತಪ್ಪಲಿದೆಯೇ ಟಿಕೆಟ್‌?
ಬೆಂಗಳೂರು: ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಘೋಷಿಸಿದ್ದರೂ, ಗೆಲುವು ಕಷ್ಟವಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ವರದಿ ಬಂದ ಕ್ಷೇತ್ರಗಳ ಶಾಸಕರಿಗೆ ಮತ್ತೆ ಟಿಕೆಟ್‌ ಸಿಗುವುದು ಕಷ್ಟ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ಅಂತಹ ಕ್ಷೇತ್ರಗಳಲ್ಲಿ ಪುಲಕೇಶಿನಗರವೂ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಸ್‌ಸಿ ಮೀಸಲು ಕ್ಷೇತ್ರವಾದ ಪುಲಕೇಶಿನಗರದಲ್ಲಿ ಅಲ್ಪಸಂಖ್ಯಾತ (ಮುಸ್ಲಿಂ) ಮತಗಳು ನಿರ್ಣಾಯಕವಾಗಿವೆ. 2018ರ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ‘ಕೈ’ ಹಿಡಿದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಅವರು ಭಾರಿ ಬಹುಮತ ಪಡೆದು ಗೆಲುವು ಕಂಡಿದ್ದರು. ಆದರೆ, ಕ್ಷೇತ್ರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜಿ. ಹಳ್ಳಿಯಲ್ಲಿ 2020ರ ಆಗಸ್ಟ್‌ 11ರಂದು ನಡೆದ ಅಹಿತಕರ ಘಟನೆಯ ಬಳಿಕ ಮುಸ್ಲಿಂ ಸಮುದಾಯ ಶಾಸಕರಿಂದ ದೂರವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು.

ಈ ಬೆನ್ನಿಗೆ, ಪುಲಕೇಶಿನಗರಕ್ಕೆ ಕೆ.ಎಚ್‌. ಮುನಿಯಪ್ಪ ಮತ್ತು ಎಚ್‌.ಸಿ. ಮಹದೇವಪ್ಪ ಅವರ ಹೆಸರು ಮುನ್ನೆಲೆಗೆ ಬಂದಿದೆ. ತಮ್ಮ ಸ್ವ ಕ್ಷೇತ್ರವನ್ನು (ಟಿ. ನರಸೀಪುರ) ಮಗ ಸುನೀಲ್‌ ಬೋಸ್‌ಗೆ ಬಿಟ್ಟು ಕೊಟ್ಟು ಪುಲಕೇಶಿನಗರ ಅಥವಾ ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಎಚ್‌.ಸಿ. ಮಹದೇವಪ್ಪ ಚಿಂತನೆ ನಡೆಸಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.

‘ಯುವ ಕ್ರಾಂತಿ ರ್‍ಯಾಲಿ’ಗೆ 5 ಲಕ್ಷ ಜನ
ಬೆಳಗಾವಿ: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಮಾರ್ಚ್‌ 20ರಂದು ‘ಯುವ ಕ್ರಾಂತಿ ರ್‍ಯಾಲಿ’ ನಡೆಸಲಿದ್ದಾರೆ. ಇದರಲ್ಲಿ 5 ಲಕ್ಷಕ್ಕೂ ಹೆಚ್ಚು ಯುವಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ಯುವ ಸಮುದಾಯವನ್ನು ಉದ್ದೇಶಿಸಿ ರಾಹುಲ್‌ ಮಾತನಾಡಲಿದ್ದಾರೆ. ಯಾವ ಕಾರಣಕ್ಕೆ ಭಾರತ್‌ ಜೋಡೊ ಯಾತ್ರೆ ಮಾಡಿದರು ಎಂಬುದನ್ನು ತಿಳಿಸುತ್ತಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದ 1924ರ ಕಾಂಗ್ರೆಸ್‌ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಇದೇ ಸ್ಥಳದಿಂದ ‘ಯುವ ಕ್ರಾಂತಿ’ ರ್‍ಯಾಲಿ ಆರಂಭಿಸಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆ’ ಎಂದರು. ‘ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಮುಖಂಡರು ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಸಮುದಾಯಕ್ಕೆ ಕಾಂಗ್ರೆಸ್‌ ಏನು ನೀಡಿದೆ? ಮುಂದೆ ಏನು ನೀಡಲಿದೆ? ಎಂಬ ಬಗ್ಗೆ ಮನವರಿಕೆ ಮಾಡಲಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ತಿಳಿಸಿದರು.

ಖರ್ಗೆ ಭೇಟಿ ಮಾಡಿದ ಟಿಕೆಟ್‌ ಆಕಾಂಕ್ಷಿಗಳು
ಮಂಡ್ಯ: ಮೂಲ ಕಾಂಗ್ರೆಸಿಗರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಮಂಡ್ಯ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಗುರುವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮುಖಂಡರಾದ ಎಂ.ಎಸ್‌.ಆತ್ಮಾನಂದ, ಅಮರಾವತಿ ಚಂದ್ರಶೇಖರ್‌, ಎಚ್‌.ಬಿ.ರಾಮು, ರಾಮಲಿಂಗಯ್ಯ, ಶಿವಾನಂದ್‌, ಸಿದ್ಧಾರೂಢ ಸತೀಶ್‌, ಶಿವಲಿಂಗೇಗೌಡ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು.

‘ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 15 ಮುಖಂಡರು ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದು, ಪಕ್ಷ ಕಟ್ಟಿದ ನಿಷ್ಠಾವಂತರಿಗೇ ಕೊಡಬೇಕು. ಹೊರಗಿನಿಂದ ಬಂದಿರುವವರಿಗೆ ಕೊಡಬಾರದು. ಮೂಲ ಕಾಂಗ್ರೆಸ್‌ನ ಯಾರಿಗೇ ಕೊಟ್ಟರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

‘ಪಕ್ಷಕ್ಕೆ ದುಡಿದ ಮುಖಂಡರಿಗೆ ಟಿಕೆಟ್‌ ನೀಡಲಾಗುವುದು. ಹೊರಗಿನಿಂದ ಬಂದವರು ಪಕ್ಷದ ಪರವಾಗಿ ಕೆಲಸ ಮಾಡಲಿ, ಮುಂದೆ ಅವರಿಗೂ ಒಳ್ಳೆಯ ಸಮಯ ಬರಲಿದೆ. ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು’ ಎಂದು ಅಮರಾವತಿ ಚಂದ್ರಶೇಖರ್‌ ಅವರು ಹೇಳಿದರು.

13 ಕ್ಷೇತ್ರಗಳಲ್ಲಿ ಯುವ ಕಾಂಗ್ರೆಸ್‌ ಲಾಬಿ
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 13 ಕ್ಷೇತ್ರಗಳಲ್ಲಿ ಯುವ ಕಾಂಗ್ರೆಸ್‌ನ ಮುಖಂಡರಿಗೆ ಟಿಕೆಟ್‌ ನೀಡಬೇಕು ಎಂದು ಯುವ ಕಾಂಗ್ರೆಸ್‌ ಮುಖಂಡರು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಆಕಾಂಕ್ಷಿಯಾಗಿರುವ ದೇವನಹಳ್ಳಿಯಲ್ಲಿ, ಮಾಜಿ ಸಚಿವ ಎಚ್‌.ಆಂಜನೇಯ ಆಕಾಂಕ್ಷಿಯಾಗಿರುವ ಹೊಳಲ್ಕೆರೆಯಲ್ಲಿ, ಮಾಜಿ ಸಚಿವ ಬಿ.ರಮಾನಾಥ ರೈ ಆಕಾಂಕ್ಷಿಯಾಗಿರುವ ಬಂಟ್ವಾಳ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ಟಿಕೆಟ್‌ ನೀಡಬೇಕು ಎಂದು ಯುವ ಕಾಂಗ್ರೆಸ್‌ ಮುಖಂಡರು ಬೇಡಿಕೆ ಸಲ್ಲಿಸಿದ್ದಾರೆ. ಸಿಂಧನೂರಿನಲ್ಲಿ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸವನಗೌಡ ಬಾದರ್ಲಿ, ಕೃಷ್ಣರಾಜನಗರದಲ್ಲಿ ಐಶ್ವರ್ಯಾ ಮಹದೇವ್‌ ಹೆಸರನ್ನು ಪರಿಗಣಿಸಬೇಕು ಎಂದೂ ತಿಳಿಸಿದ್ದಾರೆ.

ಮಿಥುನ್‌ ರೈ ಅವರು ಮೂಡುಬಿದಿರೆ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಕರ್ನಾಟಕ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್‌ ವಿ.ಶಂಕರ್ ಅವರು ಯಾದಗಿರಿ ಕ್ಷೇತ್ರದ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದಾರೆ.

‘ಗೆಲ್ಲುವ ಸಾಮರ್ಥ್ಯ ಇರುವವರ ಹೆಸರನ್ನಷ್ಟೇ ಶಿಫಾರಸು ಮಾಡಿದ್ದೇವೆ’ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ತಿಳಿಸಿದರು. ‘ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.