ADVERTISEMENT

ಚುನಾವಣೆ ಗೆದ್ದು ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಸಂಚು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2022, 11:16 IST
Last Updated 14 ಡಿಸೆಂಬರ್ 2022, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಸಂಚು ರೂಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಸಭೆ ನಡೆಸಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ‌ಪ್ರಕಾರ ಕಾಂಗ್ರೆಸ್‌ ಎಂಬುದು ದೇಶ‌ದ ಅಭಿವೃದ್ಧಿ ಮಾಡುವ ಯಾವುದೇ ‘ದುರುದ್ದೇಶ’ಗಳೇ‌ ಇಲ್ಲದ ಶುದ್ಧ ಮನಸ್ಸಿನ‌ ಭ್ರಷ್ಟ ಪಕ್ಷ.‌ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಕಾಂಗ್ರೆಸ್ಸಿಗರ ಹುನ್ನಾರ ಇದೀಗ‌ ಬಯಲಾಗಿದೆ.‌ ಗುಜರಾತ್‌ನಲ್ಲಾದಂತೆ, ಕರ್ನಾಟಕದಲ್ಲೂ‌‌ ಜನರು ಪಾಠ‌ ಕಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಜಗಳ ಬೀದಿಗೆ ಬರುತ್ತಿದ್ದಂತೆ ಎಲ್ಲಿ‌‌ ತನ್ನ ಮಗನ ಪ್ರಧಾನಿ‌ ಕನಸು ಬೀದಿಪಾಲು ಆದೀತು ಎಂದು ಬೆದರಿದ ಸೋನಿಯಾ ಗಾಂಧಿ, ತಕ್ಷಣವೇ ತಮ್ಮ‌ 'ಕೈ‘ಗೊಂಬೆ ಮಲ್ಲಿಕಾರ್ಜುನಖರ್ಗೆಯವರನ್ನು ಕರೆಸಿ,‌ ಜಗಳ ಬಂದ್‌‌‌‌ ಮಾಡಿಸಲು ತಾಕೀತು ಮಾಡಿದ್ದಾರೆ. ‌ಇದಕ್ಕೆ ‘ಜೀ ಹುಜೂರ್’ ಎಂದು ಸಭೆ ಕರೆಸಿದ್ದು ಎಂದು ಬಿಜೆಪಿ ಟೀಕಿಸಿದೆ.

ADVERTISEMENT

‘ಕಾಂಗ್ರೆಸ್ ನಾಯಕರಲ್ಲಿ ಸಾಮ್ಯತೆ ಇರುವುದು ಒಂದೇ‌ ವಿಚಾರದಲ್ಲಿ. ಅದು, ಈ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಹೇಗೆ ಸಾರ್ವತ್ರಿಕ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಬಹುದು ಎಂಬುದರಲ್ಲಿ. ಇತ್ತೀಚೆಗೆ ಖರ್ಗೆ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದ್ದೂ ಇದೇ ಕಾರಣಕ್ಕೆ’ ಎಂದು ಬಿಜೆಪಿ ಕಿಡಿಕಾರಿದ್ದಾರೆ.

ತಮ್ಮ‌ ನಾಯಕರಿಂದ‌ ಆದೇಶ ಪಡೆಯುವ ಮರಿ‌ ನಾಯಕರು ತಮ್ಮದೇ‌ ಪಕ್ಷದ ವಿರೋಧಿ ನಾಯಕರನ್ನು ತುಳಿಯಲು ಸ್ಲೀಪರ್ ಸೆಲ್‌ಗಳನ್ನು ಆ್ಯಕ್ಟಿವೇಟ್ ಮಾಡುತ್ತಾರೆ. ಒಟ್ಟಿನಲ್ಲಿ ತಮ್ಮದೇ ಜಗಳ ಬಗೆಹರಿಸಿಕೊಳ್ಳದ ಕಾಂಗ್ರೆಸ್, ಬಿಜೆಪಿಯಂಥ ದೇಶಪರ ವಿಚಾರವುಳ್ಳ ರಾಷ್ಟ್ರೀಯ ಪಕ್ಷವನ್ನು ಎದುರಿಸುವುದು ತಿರುಕನ ಕನಸಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಇವೆಲ್ಲ ನಾವು ಹೇಳುತ್ತಿಲ್ಲ.‌ ಸಭೆಗೆ ಹೋದವರೇ ಹೇಳುತ್ತಿರುವ ಮಾತು. ಸಿದ್ದರಾಮಯ್ಯ ಅವರು ತಮ್ಮ ಜಾತಿ ನಾಯಕರ ಸಭೆ ಕರೆದು ಡಿ.ಕೆ.ಶಿವಕುಮಾರ್ ವಿರುದ್ಧ ಬಯ್ಯೋ ಚಪಲ‌ ತೀರಿಸಿಕೊಂಡರೆ, ಇತ್ತ ಡಿಕೆಶಿ, ಸಿದ್ದರಾಮಯ್ಯನವರ ದುರಹಂಕಾರ ಮುರಿಯುವುದು ಹೇಗೆಂದು ಅಚ್ಚುಕಟ್ಟಾಗಿ ತಮ್ಮ ಗುಂಪಿನ ಸಭೆ ಕರೆದು ಪ್ಲಾನ್‌ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಕಿಚಾಯಿಸಿದೆ.

‘ಎಲ್ಲ ಪಕ್ಷಗಳೂ ಚುನಾವಣೆ‌ ಗೆಲ್ಲುವ ಕಾರ್ಯತಂತ್ರ‌ ರೂಪಿಸಲು ನಿತ್ಯ ಸಭೆ ಕರೆದರೆ, ಕಾಂಗ್ರೆಸ್ ನಾಯಕರು ಮಾತ್ರ ತಮ್ಮ ಜಾತಿ, ಗುಂಪು ನಾಯಕರನ್ನೇ ಸಭೆ ಸೇರಿಸಿ ತಮ್ಮಲ್ಲೇ‌‌ ಇರುವ‌ ಪ್ರತಿಸ್ಪರ್ಧಿ ನಾಯಕನನ್ನು ತುಳಿಯುವ ಬಗ್ಗೆ ಕಾರ್ಯತಂತ್ರ ರೂಪಿಸುವ ದುಃಸ್ಥಿತಿಗೆ ಇಳಿದಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.