
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಚುನಾವಣಾ ರಾಜಕೀಯ’ ವಿಧಾನಸಭೆಯಲ್ಲಿ ಬುಧವಾರ ಚರ್ಚೆಯಾಗಿತ್ತು. ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ಆರ್.ವಿ. ದೇಶಪಾಂಡೆ, ‘ಜಾತಿ ಬಲ ಇಲ್ಲದಿದ್ದರೂ ನಾನು ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. 10 ಬಾರಿ ಸ್ಪರ್ಧಿಸಿ, 2008ರಲ್ಲಿ ಮಾತ್ರ ಸೋತಿದ್ದೆ’ ಎನ್ನುವ ಮೂಲಕ ‘ನಾನೇನೂ ಕಮ್ಮಿ ಇಲ್ಲ’ ಎಂದು ಎದೆತಟ್ಟಿಕೊಂಡರು.
‘ಸಿದ್ದರಾಮಯ್ಯ ಈಗಾಗಲೇ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದಾರೆ. ಎರಡನೇ ಬಾರಿಗೆ ಮತ್ತೆ ಐದು ವರ್ಷ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾರೆ’ ಎಂದರು. ಆಗ ಬಿಜೆಪಿಯ ಸದಸ್ಯರು, ‘ಇನ್ನೊಮ್ಮೆ ಹೇಳಿ’ ಎಂದು ಕಾಲೆಳೆದರು. ಸ್ಪಷ್ಟನೆ ನೀಡಿದ ದೇಶಪಾಂಡೆ, ‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಲ್ಲ. ನನ್ನ ಬೆಂಬಲ ಸಿದ್ದರಾಮಯ್ಯ ಅವರಿಗೆ’ ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಎಸ್. ಸುರೇಶ್‌ಕುಮಾರ್, ‘ಜನತಾ ಪಕ್ಷ, ಜನತಾ ದಳ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೀರಿ. ಅದರ ಗುಟ್ಟೇನು. ಕಾಂಗ್ರೆಸ್- ಜನತಾದಳ ಉತ್ತರ - ದಕ್ಷಿಣ ಧ್ರುವಗಳಿದ್ದಂತೆ. ಆ ಆತ್ಮೀಯತೆ ಹೇಗೆ ಸಾಧ್ಯವಾಯಿತು’ ಎಂದು ಕೇಳಿದರು.
ಅದಕ್ಕೆ ದೇಶಪಾಂಡೆ, ‘ಗುಟ್ಟೇನೂ ಇಲ್ಲ. ಎಲ್ಲರೊಂದಿಗೆ ಸಂಬಂಧ ಚೆನ್ನಾಗಿದೆ. ಮುಖ್ಯಮಂತ್ರಿಗಳ ಜೊತೆಗಿನ ಆತ್ಮೀಯತೆಯ ವಿಚಾರ ಹೇಳಲಾಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.