ADVERTISEMENT

‘ಶಾಸಕರಿಗೆ ಹೆಚ್ಚು ಸೌಲಭ್ಯ–ಗೌರವ ಕೊಡಿ’

ತಿರುಪತಿಯಲ್ಲಿ ಶಾಸಕರಿಗೆ ದರ್ಶನಕ್ಕೆ ವ್ಯವಸ್ಥೆ: ಹಕ್ಕುಬಾಧ್ಯತೆಗಳ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 23:26 IST
Last Updated 24 ಸೆಪ್ಟೆಂಬರ್ 2020, 23:26 IST
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್. (ಫಿಶ್‌ ಐ ಲೆನ್ಸ್‌ ಬಳಸಿ ಸೆರೆಹಿಡಿದಿರುವ ಚಿತ್ರ)
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್. (ಫಿಶ್‌ ಐ ಲೆನ್ಸ್‌ ಬಳಸಿ ಸೆರೆಹಿಡಿದಿರುವ ಚಿತ್ರ)   

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಸಂಗ್ರಹಣ ಕೇಂದ್ರಗಳಲ್ಲಿ ಶಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು, ಭದ್ರತಾ ಸಿಬ್ಬಂದಿ ಒದಗಿಸುವಾಗ ತಾರತಮ್ಯ ನಿವಾರಿಸಬೇಕು, ಶಾಸಕರಿಗೆ ಗೌರವ ಕೊಡುವ ಶಿಷ್ಟಾಚಾರ ಪಾಲಿಸುವ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿಗಳಿಗೂ ತರಬೇತಿ ಕೊಡಬೇಕು. . .

ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿಯು ಸಲ್ಲಿಸಿದ ಮೊದಲ ವರದಿಯಲ್ಲಿ ಶಾಸಕರಿಗೆ ವಿಶೇಷ ಗೌರವ ಹಾಗೂ ಅಧಿಕಾರ ನೀಡುವ ಬಗ್ಗೆ ಮಾಡಿರುವ ಶಿಫಾರಸುಗಳಿವು. ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್‌ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಾಸಕರಿಗೆ ದರ್ಶನ ಹಾಗೂ ವಸತಿ ವ್ಯವಸ್ಥೆ ಮಾಡಬೇಕು. ರಾಜ್ಯದ ಪ್ರಮುಖ ದೇವಾಲಯಗಳಿಗೆ ಶಾಸಕರು ಭೇಟಿ ನೀಡಿದಾಗ ಶಿಷ್ಟಾಚಾರದ ಪ್ರಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

ADVERTISEMENT

*ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಶಾಸಕರು ಭೇಟಿ ನೀಡುವ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು.

*ದೆಹಲಿ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ರಾಜ್ಯದ ಶಾಸಕರು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಬೇಕು.

*ಸಭೆ–ಸಮಾರಂಭಗಳಲ್ಲಿ ಆಯಾ ಶಾಸಕರಿಗೆ ಪ್ರಾಮುಖ್ಯತೆ ನೀಡಬೇಕು.

*ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹5 ಕೋಟಿ ವರೆಗಿನ ಕಾಮಗಾರಿಗಳ ಉದ್ಘಾಟನೆಯನ್ನು ಸ್ಥಳೀಯ ಶಾಸಕರೇ ನಡೆಸಲು ಅವಕಾಶ ಕಲ್ಪಿಸಬೇಕು.

*ಹಿಂದುಳಿದ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಹಲವು ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರವನ್ನು ಶಾಸಕರಿಗೆ ನೀಡಬೇಕು.

*ಸರ್ಕಾರಿ ಸಭೆ–ಸಮಾರಂಭಗಳ ಶಿಷ್ಟಾಚಾರ ನಿಯಮಗಳಲ್ಲಿ ಇನ್ನಷ್ಟು ಸುಧಾರಣೆ ತರಬೇಕು.

*ಮಹಿಳೆಯರ ಕಳ್ಳಸಾಗಣೆ ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸಬೇಕು.

*ಅಂಗವಿಕಲ ಮಹಿಳೆಯರು, ಬುದ್ಧಿಮಾಂದ್ಯ ಮಕ್ಕಳು ಹಾಗೂ ಎಂಡೋಸಲ್ಫಾನ್‌ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗಳ ಪೋಷಣೆ ಮಾಡಲು ಜಿಲ್ಲಾಮಟ್ಟದಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾ‍ಪಿಸಬೇಕು.

*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಶಾಸಕರು ಶಿಫಾರಸು ಮಾಡುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.