ವಿಧಾನಸಭೆ
ವಿಧಾನಸಭೆಯಲ್ಲಿ ಪ್ರಶ್ನೋತ್ತರ
ಮುಂದಿನ ವರ್ಷದ ಒಳಗಾಗಿ ವಸತಿ ಯೋಜನೆಯಡಿ 1.80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹತ್ತಾಂತರಿಸಲಾಗುವುದು. ರದ್ದುಗೊಂಡಿರುವ ಮನೆಗಳ ಮರು ಮಂಜೂರಾತಿಗೆ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆಯಲಾಗಿದೆ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (ಪ್ರಶ್ನೆ: ಬಿಜೆಪಿಯ ಸಿದ್ದು ಪಾಟೀಲ)
ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಕೊಳಚೆಪ್ರದೇಶಗಳಿವೆ. ಅವುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸುಮಾರು ₹ 500 ಕೋಟಿ ಅಗತ್ಯವಿದ್ದು, ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (ಪ್ರಶ್ನೆ: ಜೆಡಿಎಸ್‌ನ ಜಿ.ಟಿ. ದೇವೇಗೌಡ)
ಅಧಿಕಾರಿಗಳ ತಪ್ಪಿನಿಂದ ಬಗರ್‌ಹುಕುಂ ಸಾಗುವಳಿ ಅರ್ಜಿಗಳು ತಿರಸ್ಕೃತವಾಗಿದ್ದರೆ ಸರಿಪಡಿಸಲಾಗುವುದು. ಪಡಾ ಅಥವಾ ಬೀಳು ಜಮೀನಿಗೆ ಸಂಬಂಧಿಸಿದಂತೆ ಬಗರ್‌ಹುಕುಂ ಅರ್ಜಿಗಳು ಇತ್ಯರ್ಥವಾದ ನಂತರ ಬೇಸಾಯ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು
ಕಂದಾಯ ಸಚಿವ ಕೃಷ್ಣ ಬೈರೇಗೌಡ (ಪ್ರಶ್ನೆ: ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ)
ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ಅದೇ ಗ್ರಾಮ ಅಥವಾ ಪಕ್ಕದ ಗ್ರಾಮದ ಗೋಮಾಳ ಹಾಗೂ ಅರಣ್ಯದಲ್ಲಿ ಜಾನುವಾರು ಮೇಯಿಸಲು ಅವಕಾಶ ಇದ್ದರೆ, ಹೆಚ್ಚುವರಿ ಗೋಮಾಳವನ್ನು ಮಂಜೂರು ಮಾಡಲು 10 ದಿನದಲ್ಲಿ ಆದೇಶ ಹೊರಡಿಸಲಾಗುವುದು
ಕಂದಾಯ ಸಚಿವ ಕೃಷ್ಣ ಬೈರೇಗೌಡ (ಪ್ರಶ್ನೆ: ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ)
ಹಾಲು ಒಕ್ಕೂಟಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರೈತರಿಗೆ ಪಾವತಿಸುವ ಹಾಲು ಖರೀದಿ ದರ ನಿಗದಿ ಮಾಡುತ್ತಿವೆ. ಈ ವಿಚಾರವಾಗಿ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಾಲಿನ ದರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಗಮನಕ್ಕೆ ತರದೆ ಏಕಾಏಕಿ ಕ್ರಮ ಕೈಗೊಳ್ಳಬಾರದೆಂದು ಸೂಚಿಸಲಾಗಿದೆ
ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ (ಪ್ರಶ್ನೆ: ಬಿಜೆಪಿಯ ಅರವಿಂದ ಬೆಲ್ಲದ್)
ಮಲೆನಾಡು ಹಾಗೂ ಕರಾವಳಿಯ ಏಳು ಜಿಲ್ಲೆಗಳಲ್ಲಿ ಭೂ ಕುಸಿತ ತಡೆಗಟ್ಟಲು ₹ 500 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಮೊತ್ತದಲ್ಲಿ ಕೊಡಗು ಜಿಲ್ಲೆಗೆ ₹ 50 ಕೋಟಿ ಬಿಡುಗಡೆ ಮಾಡಲಾಗಿದ್ದು, ಅಗತ್ಯಬಿದ್ದರೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ
ಕಂದಾಯ ಸಚಿವ ಕೃಷ್ಣ ಬೈರೇಗೌಡ (ಪ್ರಶ್ನೆ: ಕಾಂಗ್ರೆಸ್‌ನ ಡಾ. ಮಂಥರ್ ಗೌಡ)
ರಾಜ್ಯದಲ್ಲಿ ಸದ್ಯಕ್ಕೆ ಹೊಸ ತಾಲ್ಲೂಕುಗಳ ರಚನೆಯ ಪ್ರಸ್ತಾವ ಇಲ್ಲ. ಈಗಾಗಲೇ ರಚನೆಯಾಗಿರುವ ತಾಲ್ಲೂಕುಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯತೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ (ಕಾಂಗ್ರೆಸ್‌ನ ಟಿ. ರಘುಮೂರ್ತಿ)
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ
ಮೂರು ವರ್ಷಗಳಲ್ಲಿ 45 ವರ್ಷದ ಒಳಗಿನ 472 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತ ಪ್ರಕರಣಗಳು ಅಧಿಸೂಚಿತ ರೋಗ ಎಂದು ಘೋಷಣೆಯಾಗಿಲ್ಲ. ಹಾಗಾಗಿ, ಪ್ರಕರಣಗಳ ನಿಖರ ಮಾಹಿತಿ ಸಿಗುವುದಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ 2023–24ರಲ್ಲಿ 229, 2024–25ರಲ್ಲಿ 608, 2025–26ನೇ ಸಾಲಿನಲ್ಲಿ ಇದುವರೆಗೆ 167 ಮಂದಿ ಮೃತಪಟ್ಟಿದ್ದಾರೆ. ಹೃದಯಕ್ಕೆ ಸಂಬಂಧಿಸಿದಂತೆ ಜಯದೇವ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 61,299 ಇದೆ. ಜಯದೇವದಲ್ಲಿ ವಿಶಿಷ್ಟವಾದ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. 270 ವೈದ್ಯರು ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ಪ್ರಶ್ನೆ: ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ, ಬಿಜೆಪಿಯ ಧನಂಜಯ ಸರ್ಜಿ)
ಅರ್ಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸುವ, ಅನರ್ಹರ ಪಡಿತರ ಚೀಟಿ ರದ್ದು ಮಾಡಲಾಗುವುದು. ಹಿಂದಿನ ಸರ್ಕಾರದ ಅವಧಿಯಿಂದಲೂ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳು ಪರಿಷ್ಕರಣೆಯಾಗದೆ ಉಳಿದಿದ್ದವು. ಪರಿಷ್ಕರಣೆ ಕೆಲಸ ನಡೆಯುತ್ತಿದ್ದು, ಶೀಘ್ರ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗುವುದು. 3.27 ಲಕ್ಷ ಮಂದಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕದಲ್ಲಿ 80ರಷ್ಟು ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಪಡೆದಿವೆ. ಅನರ್ಹರ ವಿರುದ್ಧ ಕ್ರಮಕೈಗೊಳ್ಳುವಾಗ ರಾಜಕೀಯ ಮಾಡದೆ, ಪಕ್ಷಭೇದ ಮರೆತು ಸಹಕಾರ ನೀಡಬೇಕು
ಆಹಾರ ಸಚಿವ ಕೆ.ಎಚ್. ಮುನಿಯಪ್ಪ, (ಬಿಜೆಪಿಯ ಪ್ರತಾಪಸಿಂಹ ನಾಯಕ್, ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.