ADVERTISEMENT

ವಿಧಾನಮಂಡಲ ಅಧಿವೇಶನ ಇಂದಿನಿಂದ: ಸರ್ಕಾರದ ತರಾಟೆಗೆ ಸಜ್ಜು

ರಾಜ್ಯಪಾಲರ ಭಾಷಣದ ಮೇಲೆ 3 ದಿನಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 21:53 IST
Last Updated 16 ಫೆಬ್ರುವರಿ 2020, 21:53 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಪೌರತ್ವ ತಿದ್ದುಪಡಿಕಾಯ್ದೆ ವಿರುದ್ಧ ಹೋರಾಟ, ಹಲವರ ಮೇಲೆ ದೇಶದ್ರೋಹ ಪ್ರಕರಣಗಳ ದಾಖಲು, ಅತಿವೃಷ್ಟಿ ಸಂತ್ರಸ್ತರಿಗೆ ಸಿಗದ ಪರಿಹಾರ, ಹಣಕಾಸಿನ ಕೊರತೆಯಿಂದ ವಿವಿಧ ಯೋಜನೆಗಳಿಗೆ ಅನುದಾನ ಕಡಿತದಂತಹ ವಿಷಯಗಳು ಸೋಮವಾರ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಭಾರಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.

ಪೌರತ್ವ ಕಾಯ್ದೆ ವಿರುದ್ಧದ ಹೋರಾಟದ ಕಾವು ರಾಜ್ಯದಲ್ಲಿ ಇನ್ನೂ ಆರದಿರುವುದು ಮತ್ತು ಆ ಹೋರಾಟಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್‌, ಜೆಡಿಎಸ್‌ ಉಭಯ ಸದನಗಳಲ್ಲೂ ಬಿ.ಎಸ್‌. ಯಡಿಯೂರಪ್ಪ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ.

ವಿಧಾನಸಭೆ ಉಪ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಬಹುಮತದ ಹುಮ್ಮಸ್ಸಿನಲ್ಲಿ ಬಿಜೆಪಿ ತೇಲುತ್ತಿದ್ದರೂ ರಾಜ್ಯವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ಪರಿಹಾರ ಕಂಡುಕೊಳ್ಳದೆ ತಿಣುಕಾಡುತ್ತಿರುವುದು ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ADVERTISEMENT

ಸಿಎಎ, ಎನ್ಆರ್‌ಸಿ ವಿರೋಧಿಸಿ ರಾಜ್ಯದ ಹಲವೆಡೆ ನಡೆದ ಹೋರಾಟಗಳು, ಗಲಭೆಗಳು, ಮಂಗಳೂರಿನಲ್ಲಿ ನಡೆದ ಗೋಲಿಬಾರ್‌, ಬೀದರ್‌ನ ಶಾಹೀನ್‌ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ವಿದ್ಯಾರ್ಥಿನಿ ತಾಯಿಯ ಬಂಧನ, ವಿದ್ಯಾರ್ಥಿಗಳ ವಿಚಾರಣೆ, ಪೊಲೀಸ್‌ ದುರ್ಬಳಕೆ ಮುಂತಾದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸೂಚನೆ ಇದೆ.

ವಿರೋಧ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಬಿಜೆಪಿ ಸದಸ್ಯರೂ ಸಜ್ಜಾಗಿದ್ದಾರೆ. ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಒತ್ತಾಯಿಸಲಿದ್ದಾರೆ.

‘ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದ ಸಂತ್ರಸ್ತರಿಗೆ ಇನ್ನೂ ಪರಿಹಾರ ಒದಗಿಸಿಲ್ಲ. ಇದರಿಂದ ಸಂಕಷ್ಟದಲ್ಲಿ ನರಳುತ್ತಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದಲ್ಲಿ ಪರಿಹಾರ ಬಿಡುಗಡೆಗೊಳಿಸದೇ ತಾರತಮ್ಯ ಮಾಡಿದೆ’ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ.

ಸಚಿವ ಆರ್‌.ಅಶೋಕ ಅವರ ಪುತ್ರ ಇದ್ದರೆನ್ನಲಾದ ಕಾರುಈಚೆಗೆ ಹೊಸಪೇಟೆ ಸಮೀಪ ಅಪಘಾತಕ್ಕಿಡಾಗಿ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣ ಹಾಗೂ ಅರಣ್ಯ ಖಾತೆ ಪಡೆದಿರುವ ಆನಂದಸಿಂಗ್‌ ವಿರುದ್ಧ ಅರಣ್ಯ ಕಾಯ್ದೆಯ ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿರುವ 15 ಪ್ರಕರಣಗಳಂತಹ ವಿಷಯಗಳನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ.

ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ಗೋಮಾಳ ಜಮೀನು ನೀಡಿರುವುದು. ಇದನ್ನು ತಡೆಯಲು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಯತ್ನಿಸುತ್ತಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಮರಕ್ಕೆ ಕಾರಣವಾಗಲಿದೆ.

‘ಪೌರತ್ವ’ ಪ್ರಸ್ತಾಪಿಸಿದರೆ ಕಾಂಗ್ರೆಸ್‌ ಅಡ್ಡಿ’
ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರೆ ಅಡ್ಡಿಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮನೆಯಲ್ಲಿ ಭಾನುವಾರ ನಡೆದ ಪಕ್ಷದ ಹಿರಿಯರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಈ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಶಾಸಕರು ವಿರೋಧ ವ್ಯಕ್ತಪಡಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಂತರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಸಭೆ ಸೇರಿ, ನಂತರ ಎಲ್ಲ ಶಾಸಕರು ಸದನಕ್ಕೆ ತೆರಳಲಿದ್ದಾರೆ.

ಹಣಕಾಸು ಸಂಕಷ್ಟ ಚರ್ಚೆ: ಕೇಂದ್ರದಿಂದ ರಾಜ್ಯಕ್ಕೆ ಸಂದಾಯವಾಗುವ ತೆರಿಗೆ ಆದಾಯದ ಪಾಲಿನಲ್ಲಿ ತೀವ್ರ ಕುಸಿತ ಆಗಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಲಿದೆ.

*
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಪಕ್ಷದ ಎಲ್ಲ ಶಾಸಕರು ಗಟ್ಟಿ ದನಿಯಲ್ಲಿ ಹೋರಾಟ ನಡೆಸಲಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ಸರ್ಕಾರದಲ್ಲಿ ನಿರಂತರವಾಗಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡಲಾಗುವುದು
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.