ADVERTISEMENT

ಪಿಡಬ್ಲ್ಯುಡಿ, ಬಿಡಿಎ ಅಧಿಕಾರಿಗಳ ವಿರುದ್ಧ ತನಿಖೆ

ನ್ಯಾಯಮೂರ್ತಿಗಳ ವಸತಿ ಸಮುಚ್ಚಯ ಕಾಮಗಾರಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:18 IST
Last Updated 10 ಮಾರ್ಚ್ 2020, 22:18 IST

ಬೆಂಗಳೂರು: ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ (ಸಿಎ) ಎಚ್‌ಎಸ್‌ಆರ್‌ ಬಡಾವಣೆಯ ಜಮೀನಿನಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳ ವಸತಿಗೃಹಗಳ ನಿರ್ಮಾಣಕ್ಕೆ ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.

ಭಾರತದ ಲೆಕ್ಕಪತ್ರ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯ ಶಿಫಾರಸುಗಳ ಕುರಿತ ಸಮಿತಿ ಎರಡನೇ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ವಸತಿಗೃಹಗಳ ನಿರ್ಮಾಣಕ್ಕೆ ಆಟದ ಮೈದಾನದಿಂದ ಕೂಡಿರುವ 7 ಎಕರೆ 19 ಗುಂಟೆ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2008ರಲ್ಲಿ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿತ್ತು. ₹30.01 ಕೋಟಿ ಮೊತ್ತದ ಕಾಮಗಾರಿಯನ್ನು ಗುತ್ತಿಗೆದಾರರಿಗೆ 2008ರ ಸೆಪ್ಟೆಂಬರ್‌ನಲ್ಲಿ ನೀಡಲಾಗಿತ್ತು. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ₹1.90 ಕೋಟಿಯನ್ನು ಗುತ್ತಿಗೆದಾರರಿಗೆ ಕೊಡಲಾಗಿತ್ತು.ಸಿಎ ನಿವೇಶನದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. ಕಾಮಗಾರಿಗೆ ಕೋರ್ಟ್‌ ತಡೆಯಾಜ್ಞೆ ನೀಡಿತ್ತು.

ADVERTISEMENT

ಬಳಿಕ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರನಿಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ನೋಟಿಸ್‌ ನೀಡಿದ್ದರು. ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ₹5.61 ಕೋಟಿ ಹಾನಿ ಸೇರಿಸಿ ₹6.51 ಕೋಟಿ ಪಾವತಿಸುವಂತೆ ಗುತ್ತಿಗೆದಾರರು ಕೋರಿದ್ದರು. ಇದಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ಒಪ್ಪಿರಲಿಲ್ಲ. ಪ್ರಕರಣ ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರನ್ನು ನೇಮಿಸಲಾಗಿತ್ತು. ಗುತ್ತಿಗೆದಾರನ ಜತೆಗಿನ ಒಪ್ಪಂದವನ್ನು 2012ರಲ್ಲಿ ರದ್ದುಗೊಳಿಸಿ ಆದೇಶಿಸಲಾಗಿತ್ತು. ₹4.68 ಕೋಟಿಯ ಜತೆಗೆ ಅಕ್ಟೋಬರ್‌ 13ರ ವರೆಗೆ ಮಾಡುವ ಪಾವತಿಗೆ ಶೇ 12 ಹಾಗೂ ನಂತರ ಶೇ 18ರಷ್ಟು ಬಡ್ಡಿಯನ್ನು ವಿಧಿಸಿ ಮಧ್ಯಸ್ಥಿಕೆದಾರರು ತೀರ್ಪು ನೀಡಿದ್ದರು.

ಇದು ಮೇಲ್ಮನವಿಗೆ ಅರ್ಹವಾದ ಪ್ರಕರಣ ಅಲ್ಲ ಎಂದು ಕಾನೂನು ಇಲಾಖೆ ತಿಳಿಸಿತ್ತು. ಆದರೂ, ಲೋಕೋಪಯೋಗಿ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಕೋರ್ಟ್‌ ವಜಾಗೊಳಿಸಿತ್ತು. ಮೇಲ್ಮನವಿ ವಜಾ ಆದ 15 ತಿಂಗಳ ಬಳಿಕ ಲೋಕೋಪಯೋಗಿ ಇಲಾಖೆಯು ₹5.76 ಕೋಟಿಯನ್ನು, 2013ರ ನವೆಂಬರ್‌ನಿಂದ 2015ರ ಫೆಬ್ರುವರಿ ವರೆಗೆ ₹92 ಲಕ್ಷ ಬಡ್ಡಿಯನ್ನು ಪಾವತಿಸಿತ್ತು. ಇದರಿಂದಾಗಿ ಸರ್ಕಾರ ₹7.71 ಕೋಟಿ ನಷ್ಟ ಅನುಭವಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಿತಿ ಹೇಳಿದ್ದೇನು?
*1985ರ ಕರ್ನಾಟಕ ಉದ್ಯಾನ, ಆಟದ ಮೈದಾನ ಮುಕ್ತ ಪ್ರದೇಶಗಳ ಕಾಯ್ದೆ ಪ್ರಕಾರ ಆಟದ ಮೈದಾನದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೂ ಈ ಜಾಗವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆ ಸ್ಥಳದಲ್ಲಿ ಯಾವುದೇ ಪರಿಶೀಲನೆ ನಡೆಸದೆ ಕಾನೂನುಬಾಹಿರವಾಗಿ ವಸತಿಗೃಹಗಳ ನಿರ್ಮಾಣ ಆರಂಭಿಸಲಾಗಿತ್ತು.

*ಈ ಕಾಮಗಾರಿಯನ್ನು ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೂ ಇಲಾಖೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಇದರಿಂದಾಗಿ, ಗುತ್ತಿಗೆದಾರರು ಮಧ್ಯಸ್ಥಿಕೆದಾರರ ಮೊರೆ ಹೋದರು. ಇದರಿಂದಾಗಿ, ₹5.76 ಕೋಟಿಯನ್ನು ಇಲಾಖೆ ಪಾವತಿಸುವಂತಾಗಿಯಿತು.ಇದೊಂದು ವ್ಯರ್ಥ ವೆಚ್ಚ.

*ಲೋಕೋಪಯೋಗಿ ಇಲಾಖೆಯಿಂದ ಆದ ಲೋಪಗಳ ಬಗ್ಗೆ ಸಿಎಜಿ ಆಕ್ಷೇಪಿಸಿದ್ದರು. ಈ ಪ್ರಕರಣದ ಬಗ್ಗೆ ಇಲಾಖಾ ವಿಚಾರಣೆ ನಡೆಸದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿಲ್ಲ. ಈ ಧೋರಣೆ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.