ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ 834 ಕಿ.ಮೀ. ರಸ್ತೆ ಗುಂಡಿ ಮುಕ್ತ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 20:53 IST
Last Updated 21 ಡಿಸೆಂಬರ್ 2021, 20:53 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬೆಳಗಾವಿ (ಸುವರ್ಣ ವಿಧಾನಸೌಧ): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 470 ಮುಖ್ಯ, ಉಪ ಮುಖ್ಯ ರಸ್ತೆಗಳ ಪೈಕಿ 311 ರಸ್ತೆಗಳ 834 ಕಿ.ಮೀ. ಗುಂಡಿ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ಮಾಡಿದ್ದ ಪ್ರಸ್ತಾಪಕ್ಕೆ ಮಂಗಳವಾರ ಉತ್ತರ ನೀಡಿರುವ ಅವರು, ‘ಮಳೆಯಿಂದಾಗಿ ರಸ್ತೆಗಳಿಗೆ ಹಾನಿಯಾಗಿತ್ತು. ಈಗ ಮಳೆ ಕಡಿಮೆಯಾಗಿರುವುದರಿಂದ ರಸ್ತೆಗಳ ನಿರ್ವಹಣೆ ಮತ್ತು ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

159 ರಸ್ತೆಗಳಲ್ಲಿ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. 180 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

2015–16ರಿಂದ ಬಿಬಿಎಂಪಿಗೆ ₹ 20,600 ಕೋಟಿ ಅನುದಾನ ನೀಡಲಾಗಿದೆ. ವೈಟ್‌ ಟಾಪಿಂಗ್‌, ಟೆಂಡರ್‌ ಶ್ಯೂರ್‌ ಮಾದರಿ ರಸ್ತೆ ನಿರ್ಮಾಣ, ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 100 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲಾಗಿದೆ. 30 ಕಿ.ಮೀ. ಉದ್ದದ ಟೆಂಡರ್‌ ಶ್ಯೂರ್‌ ರಸ್ತೆ ನಿರ್ಮಿಸಲಾಗಿದೆ ಎಂದು ಮಾಹಿತಿ
ನೀಡಿದ್ದಾರೆ.

ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳು, ನಗರದ ಎಲ್ಲೆಡೆ ಮನೆ, ಮನೆಗೆ ಕೊಳವೆ ಮೂಲಕ ಅನಿಲ ಪೂರೈಕೆ ಸೇರಿದಂತೆ ವಿವಿಧ ಕಾರಣಗಳಿಂದ ರಸ್ತೆಗಳನ್ನು ಅಗೆಯಲಾಗುತ್ತಿದೆ. ಎಲ್ಲ ರಸ್ತೆಗಳ ಸಮಗ್ರ ಮಾಹಿತಿ ದಾಖಲೀಕರಣದ ಮೂಲಕ ಪದೇ ಪದೇ ರಸ್ತೆಗೆ ಹಾನಿಯಾಗದಂತೆ ತಡೆಯಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.