
ಸುವರ್ಣವಿಧಾನಸೌಧ (ಬೆಳಗಾವಿ): ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಆರೋಪಿಸಿರುವ ಬಿಜೆಪಿ, ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ನೀಡಿರುವ ಭರವಸೆಗಳ ಈಡೇರಿಕೆ ಕುರಿತು ಶ್ವೇತ ಪತ್ರಹೊರಡಿಸಬೇಕು ಎಂದು ಆಗ್ರಹಿಸಿದೆ.
ಈಡೇರಿಸಿದ ಭರವಸೆಗಳೆಷ್ಟು: ಅಶೋಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯ ಈ ಹಿಂದಿನ ಅಧಿವೇಶನಗಳಲ್ಲಿ, ಕಲಬುರಗಿಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ನೀಡಿರುವ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎಂದು ವಿಧಾನಸಭೆಯಲ್ಲಿ ಚರ್ಚೆ ಆರಂಭಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.
ಕೆಕೆಆರ್‌ಡಿಬಿ ಅನುದಾನದಡಿ ಜಿಲ್ಲಾ ತಾಲ್ಲೂಕು ಆಸ್ಪತ್ರೆ, ಪಿಎಚ್‌ಸಿ,ಸಿಎಚ್‌ಸಿ ನಿರ್ಮಿಸಲು ₹900 ಕೋಟಿ ನೀಡಲಾಗುವುದು ಎಂದು ಹೇಳಿದ್ದರು. ಇದರ ಪ್ರಗತಿ ಎಷ್ಟಾಗಿದೆ ಎಂದು ಕೇಳಿದರು.
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ಎತ್ತರಿಸುವ ಯೋಜನೆ ಜಾರಿ ಮಾಡಲು ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಬೇಕಿದೆ. ಇಲ್ಲವೇ, ಎಲ್ಲ ಇಲಾಖೆಗಳಲ್ಲಿ ಶೇ 20ರಷ್ಟು ಅನುದಾನ ಕಡಿತ ಮಾಡಬೇಕು ಎಂದು ಹಣಕಾಸು ಇಲಾಖೆ ಸಲಹೆ ನೀಡಿದೆ. ಈ ಸಲಹೆಯ ಪ್ರಸ್ತಾವ ಸಚಿವ ಸಂಪುಟಕ್ಕೂ ಹೋಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ₹2176 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ₹874 ಕೋಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣದಲ್ಲಿ ₹833 ಕೋಟಿ ಕಡಿತ ಮಾಡಬೇಕೆಂಬುದು ಪ್ರಸ್ತಾವದಲ್ಲಿದೆ. ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
‘ಪ್ರವಾಹದ ಕಾರಣ ಕಲಬುರಗಿ, ಬೀದರ್, ವಿಜಯಪುರ, ಯಾದಗಿರಿ ಮತ್ತು ಇತರ ಜಿಲ್ಲೆಗಳಲ್ಲಿ 117ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡವು. 20 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿ, 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದರು. ಅವರೂ ಕಾರಿನಲ್ಲೇ ಹೋಗಿದ್ದರೆ ಜನರ ಸಮಸ್ಯೆ ಅರಿಯಬಹುದಿತ್ತು. ಐಎಎಸ್ ಅಧಿಕಾರಿಗಳು ಹೇಳಿದ್ದನ್ನು ಕೇಳಿಕೊಂಡು ವಾಪಸ್ ಬಂದರು. ಅಧಿಕಾರಿಗಳು ಕೂಡ ಸಮೀಕ್ಷೆಗಾಗಿ ಗ್ರಾಮಗಳಿಗೆ ಹೋಗಿಲ್ಲ’ ಎಂದು ಅಶೋಕ ಟೀಕಿಸಿದರು.
‘ತಾರತಮ್ಯದ ಕಾರಣಕ್ಕೆ ಪ್ರತ್ಯೇಕತೆಯ ಕೂಗು’
ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದ್ದು ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹೀಗಾಗಿಯೇ ಪ್ರತ್ಯೇಕ ರಾಜ್ಯದ ಕೂಗು ಹಲವಾರು ಬಾರಿ ಎದ್ದಿದೆ. ದಕ್ಷಿಣ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯನ್ನು ಈ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತಿಲ್ಲ. ಈ ಭಾಗದಲ್ಲಿ ಪ್ರವಾಹದಿಂದ ತೊಗರಿ ಮೆಕ್ಕೆಜೋಳ ಹೆಸರು ಉದ್ದು ಮೊದಲಾದ ಬೆಳೆಗಳು ನಾಶವಾಗಿವೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಒಂದು ವರ್ಷ ಕಳೆದರೂ ತುಂಗಭದ್ರಾ ಅಣೆಕಟ್ಟೆಗೆ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಮುಗಿದಿಲ್ಲ. ಈ ಬಾರಿ ಆ ಭಾಗದಲ್ಲಿ ರೈತರ ಎರಡನೇ ಬೆಳೆಗೆ ನೀರು ಇಲ್ಲ. ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಾಗಿ ರೈತರಿಗೆ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ನಿವಾರಣೆಗೆ ಆದ್ಯತೆ ಮೇರೆಗೆ ಕ್ರಮ ವಹಿಸಬೇಕು.
– ಬಿ.ವೈ.ವಿಜಯೇಂದ್ರ, ಬಿಜೆಪಿ
______________
ಸಭಾಧ್ಯಕ್ಷರ ಪೀಠದ ಎದುರು ಯತ್ನಾಳ ಪ್ರತಿಭಟನೆ
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಯತ್ನಾಳ ಅವರು ಈ ಭಾಗದ ಶಾಸಕರಿಗೆ ಮಾತನಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟಿಸಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಕುರಿತ ಚರ್ಚೆ ನಡೆಸುವಂತೆ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಬಿಜೆಪಿಯ ಬಿ.ವೈ. ವಿಜಯೇಂದ್ರ ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಅವಕಾಶ ನೀಡಿದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಶಿವಲಿಂಗೇಗೌಡ ನಂತರ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಟೀಕಿಸಲು ಮುಂದಾದರು. ಈ ವೇಳೆ ಎದ್ದು ನಿಂತ ಯತ್ನಾಳ ‘ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಾತನಾಡಲು ಅವಕಾಶ ಕೊಡಿ. ಹಳೇ ಮೈಸೂರು ಭಾಗದ ಶಾಸಕರಿಗೆ ಅವಕಾಶ ನೀಡಿದರೆ ಹೇಗೆ’ ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರ ಪೀಠದ ಎದುರು ಬಂದು ಪ್ರತಿಭಟಿಸಿದರು.
‘ಆಂಧ್ರದ ಸ್ಥಿತಿ ಕರ್ನಾಟಕಕ್ಕೆ ಬೇಡ’
ಉತ್ತರ–ದಕ್ಷಿಣ ಕರ್ನಾಟಕದ ನಡುವಿನ ತಾರತಮ್ಯ ನಿವಾರಣೆಯಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಆಂಧ್ರಪ್ರದೇಶ–ತೆಲಂಗಾಣದ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ ಎಂಬ ಆಕ್ರೋಶ ವಿಧಾನಪರಿಷತ್ತಿನಲ್ಲಿ ವ್ಯಕ್ತವಾಯಿತು.
‘ವಿವಿಧ ವಿಷಯಗಳಲ್ಲಿ ವ್ಯತ್ಯಾಸ’
ಆರ್ಥಿಕ ಶೈಕ್ಷಣಿಕ ಆರೋಗ್ಯ ಕ್ಷೇತ್ರಗಳಷ್ಟೇ ಅಲ್ಲ ಶಾಸಕರು ವಿಧಾನಪರಿಷತ್ ಸದಸ್ಯರು ಸಂಸದರ ಸ್ಥಾನಗಳಲ್ಲೂ ಉತ್ತರ–ದಕ್ಷಿಣದ ನಡುವೆ ವ್ಯತ್ಯಾಸಗಳಿವೆ. ದಕ್ಷಿಣ ಭಾಗಕ್ಕೆ ಹೋಲಿಸಿದರೆ 18 ಶಾಸಕರು 31 ವಿಧಾನಪರಿಷತ್ ಸದಸ್ಯರು ಇಬ್ಬರು ಲೋಕಸಭಾ ಸದಸ್ಯರು ಕಡಿಮೆ ಇದ್ದಾರೆ. ಇದುವರೆಗೆ ಏಳು ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದವರು 14 ದಕ್ಷಿಣ ಕರ್ನಾಟಕದವರು ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಸುಮಾರು 600 ಕಿ.ಮೀ. ಹರಿದರೂ 15.30 ಲಕ್ಷ ಎಕರೆಯನ್ನಷ್ಟೇ ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗಿದೆ.
– ಹಣಮಂತ ನಿರಾಣಿ ಬಿಜೆಪಿ
______________
‘ಏಮ್ಸ್’ ಮಂಜೂರಾತಿಗೆ ನಿರ್ಣಯ
ಕೇಂದ್ರ ಸರ್ಕಾರ ಈವರೆಗೆ 26 ಅಖಿಲ ಭಾರತ ವೈದ್ಯಕೀಯ ಕಾಲೇಜುಗಳನ್ನು (ಏಮ್ಸ್) ಮಂಜೂರು ಮಾಡಿದೆ. ಕರ್ನಾಟಕಕ್ಕೆ ಮಂಜೂರು ಮಾಡುವ ಯೋಚನೆ ಕೇಂದ್ರಕ್ಕಿದೆ. ಆದರೆ ಸ್ಥಳ ಅಂತಿಮವಾಗಿಲ್ಲ. ರಾಜ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಂಜೂರು ಮಾಡುವ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು.
– ಶಶೀಲ್ ನಮೋಶಿ ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.