ADVERTISEMENT

ನಾಗದೇವತೆ ಪೂಜೆಗೆ ಅಡ್ಡಿ; ಪರಿಷತ್‌ನಲ್ಲಿ ಬಿಜೆಪಿ ಧರಣಿ

ಪುನೀತ್ ಕೆರೆಹಳ್ಳಿ ವಿರುದ್ಧ 10 ಪ್ರಕರಣ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 16:14 IST
Last Updated 12 ಜುಲೈ 2023, 16:14 IST
BJP
BJP   

ಬೆಂಗಳೂರು: ಮೆಜೆಸ್ಟಿಕ್‌ ಬಳಿ ಇರುವ ತುಳಸಿತೋಟದಲ್ಲಿನ ನಾಗರಕಟ್ಟೆಯ ನಾಗದೇವತೆ ಪೂಜೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಪೂಜಾ ಆಯೋಜನೆ ಮಾಡಿದವರಿಗೆ ನೋಟಿಸ್‌ ನೀಡಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಧರ್ಮ ವಿರೋಧಿ ನಡೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬುಧವಾರ ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಎನ್‌.ರವಿಕುಮಾರ್, ಹಿಂದೂ ಸಂಕಲ್ಪ ರಾಷ್ಟ್ರದ ವತಿಯಿಂದ ಜುಲೈ 9ರಂದು ಪೂಜೆ ಆಯೋಜಿಸಿದ್ದ ಪುನೀತ್‌ ಕೆರೆಹಳ್ಳಿ ಅವರಿಗೆ ನೋಟಿಸ್‌ ನೀಡಲಾಗಿದೆ. ಹಿಂದೂ ದೇವರ ಪೂಜೆಗೆ ಅಡ್ಡಿಪಡಿಸಲಾಗುತ್ತಿದೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ತಕ್ಷಣ ಉತ್ತರ ನೀಡಬೇಕು ಎಂದು ಪಟ್ಟುಹಿಡಿದರು. 

ನಿಯಮದಂತೆ ಎರಡು ದಿನಗಳ ಒಳಗೆ ಗೃಹ ಸಚಿವರಿಂದ ಉತ್ತರ ಕೊಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿದರು. ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಈ ಸಮಯದಲ್ಲಿ ಕೃಷ್ಣ ಬೈರೇಗೌಡ ಅವರು ’ನೀವು ರಾಜ್ಯ ಹಾಳು ಮಾಡಿದ್ದೀರಿ. ಈಗ ಸದನದ ಕಲಾಪ ಹಾಳು ಮಾಡಬೇಡಿ’ ಎಂದಿದ್ದು ವಿರೋಧ ಪಕ್ಷದ ಸದಸ್ಯರನ್ನು ಕೆರಳಿಸಿತು. ಗದ್ದಲದ ವಾತಾವರಣ ನಿರ್ಮಾಣವಾದ್ದರಿಂದ ಸಭಾಪತಿ ಕಲಾಪವನ್ನು ಮುಂದೂಡಿದರು.

ADVERTISEMENT

ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರ ನೀಡಿದ ಗೃಹ ಸಚಿವ ಜಿ. ಪರಮೇಶ್ವರ, ‘ನಾಗರಕಟ್ಟೆ ಪೂಜೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪುನೀತ್ ಕೆರೆಹಳ್ಳಿ ಅಪರಾಧ ಹಿನ್ನಲೆಯ ವ್ಯಕ್ತಿ. ಆತನ ಮೇಲೆ 10 ಪ್ರಕರಣಗಳಿವೆ. ಒಂದು ಪ್ರಕರಣವೂ ದಾಖಲಾಗಿದೆ. ಜಾಮೀನಿನ ಮೇಲೆ ಆತ ಹೊರಗಿದ್ದಾನೆ. ಈತನ ಮೇಲೆ ಕೇಸ್ ಇರುವ ಕಾರಣಕ್ಕೆ ನೋಟಿಸ್‌ ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ನೋಟಿಸ್‌ ನೀಡಿಲ್ಲ. ಪೂಜೆ ಮಾಡುವುದಕ್ಕೆ ಯಾವುದೇ ಪೊಲೀಸ್ ಅನುಮತಿ ಬೇಕಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆಗ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ನಾವು ಪ್ರಶ್ನೆ ಎತ್ತಿರುವುದು ಪೂಜೆ ಮಾಡಲು ಪೊಲೀಸ್ ಅನುಮತಿ ಬೇಕೇ ಎಂಬ ಬಗ್ಗೆ. ಯಾವುದೇ ವ್ಯಕ್ತಿ ಬಗ್ಗೆ ನಾವು ಪ್ರಸ್ತಾಪ ಮಾಡುತ್ತಿಲ್ಲ. ಪೂಜೆ ಮಾಡಲು ಅನುಮತಿ ಪಡೆಯಬೇಕೇ?‌ ವ್ಯಕ್ತಿ ಮೇಲೆ ಪ್ರಕರಣ ದಾಖಲಾಗಿದ್ದರೆ ಅದಕ್ಕೆ ನಮ್ಮ ಆಕ್ಷೇಪ ಇಲ್ಲ‘ ಎಂದರು.

‘ಯಾವ ವ್ಯಕ್ತಿ ಪೂಜೆಗೆ ಕರೆ ಕೊಟ್ಟಿದ್ದರೋ ಅವರ ಮೇಲೆ ಸಂಶಯವಿದೆ. ಪೂಜೆ ‌ಮಾಡಲು ಯಾವುದೇ ಅನುಮತಿ ಬೇಕಿಲ್ಲ. ಆದರೆ, ಆಯೋಜನೆ ಮಾಡಿದ್ದ ವ್ಯಕ್ತಿ ಮೇಲೆ ಅಪರಾಧ ಪ್ರಕರಣಗಳಿವೆ. ಹೀಗಾಗಿ ಪೊಲೀಸರು ನೋಟಿಸ್‌ ನೀಡಿದ್ದಾರೆ’ ಎಂದೂ ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.