ADVERTISEMENT

ರಾಮನಗರ ಅಭಿವೃದ್ಧಿ: ಅಶ್ವತ್ಥನಾರಾಯಣ– ಕಾಂಗ್ರೆಸ್‌ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 4:24 IST
Last Updated 18 ಜುಲೈ 2023, 4:24 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ರಾಮನಗರದ ಅಭಿವೃದ್ಧಿ ವಿಚಾರವಾಗಿ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ವಿಧಾನಸಭೆಯಲ್ಲಿ ಸೋಮವಾರ ಜಟಾಪಟಿ ನಡೆಯಿತು.

ಬಜೆಟ್‌ ಮೇಲೆ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಅವರು, ‘ರಾಮನಗರ ದೇಶಕ್ಕೆ ಒಬ್ಬ ಪ್ರಧಾನಿ, ಮೂರರಿಂದ– ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ್ದರೂ ಒಂಬತ್ತು ದಿನಗಳಿಗೊಮ್ಮೆ ಮಾತ್ರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೊಳಕು ನೀರು ಪೂರೈಸಲಾಗುತ್ತಿದೆ’ ಎಂದರು.

‘ಇಕ್ಬಾಲ್‌ ಹುಸೇನ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ರಾಮನಗರಕ್ಕೆ ಕಾವೇರಿ ನೀರು ಒದಗಿಸಲು ₹40 ಕೋಟಿ ಒದಗಿಸಿದ್ದೆವು. ಇವರ ಸರ್ಕಾರ ಬಂದ ಮೇಲೆ ರಾಮನಗರಕ್ಕೆ ಒದಗಿಸಿದ್ದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಕದ್ದೊಯ್ದಿದ್ದಾರೆ. ಈಗ ಕುಡಿಯಲು ಕೊಳಚೆ ನೀರು ಒದಗಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಅಶ್ವತ್ಥನಾರಾಯಣ ಹೇಳಿದಾಗ ಕಾಂಗ್ರೆಸ್‌ ಸದಸ್ಯರು ಗದ್ದಲ ಎಬ್ಬಿಸಿದರು.

ADVERTISEMENT

ಅಶ್ವತ್ಥನಾರಾಯಣ ಅವರು ಮಾತನಾಡುವ ವೈಖರಿಯನ್ನು ಗೇಲಿ ಮಾಡಿದ ಸಚಿವ ಕೆ.ಎನ್.ರಾಜಣ್ಣ, ‘ನೀವು ನಾಟಕಗಳಲ್ಲಿ ಮಾತನಾಡುವ ರೀತಿಯಲ್ಲಿ ಮಾತನಾಡುತ್ತೀರಿ. ನಾಟಕ ಕಂಪನಿಯಿಂದ ಬಂದಿದ್ದೀರಾ’ ಎಂದು ಹೀಯಾಳಿಸಿದರು.‌

ಇದರಿಂದ ರೇಗಿದ ಅಶ್ವತ್ಥನಾರಾಯಣ, ‘ನೀವೇನು ಘನಂದಾರಿಯಂತೆ ಮಾತನಾಡುತ್ತೀರಾ, ನೀವು ಮಾತನಾಡುವ ಧಾಟಿ, ಧ್ವನಿ, ಹಾವ ಭಾವಗಳೂ ನಾಟಕೀಯವಾಗಿಲ್ಲವೇ? ನನ್ನ ಬಗ್ಗೆ ಏಕೆ ಮಾತನಾಡುತ್ತೀರಿ’ ಎಂದು ತಿರುಗೇಟು ನೀಡಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.

‘ನೀವು ಕಿರುಚಾಡ ಬೇಡಿ‘ ಎಂದು ರಾಜಣ್ಣ ಹೇಳಿದಾಗ, ‘ನೀವೂ ಹಾಗೇ ತಾನೆ ಮಾತನಾಡುವುದು’ ಎಂದು ಏರಿದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಸದಸ್ಯರು ಅಶ್ವತ್ಥನಾರಾಯಣ ವಿರುದ್ಧ ಮುಗಿ ಬಿದ್ದಾಗ, ಸಭಾಧ್ಯಕ್ಷ ಯು.ಟಿ.ಖಾದರ್‌ ಸದಸ್ಯರನ್ನು ಸಮಾಧಾನಪಡಿಸಿ ಕೂರಿಸಿದರು.

ಕಳೆದ ವರ್ಷ ರಾಮನಗರದಲ್ಲಿ 5 ದಿನಗಳ ಕಾಲ ಭಾರಿ ಮಳೆ ಬಂದು ಕೆರೆ ಕೋಡಿ ಹರಿದು ಮನೆಗಳಿಗೆ ನೀರು ನುಗ್ಗಿತ್ತು. ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಸ್ತುವಾರಿ ಅಶ್ವತ್ಥನಾರಾಯಣ ಬಂದು ಪರಿಹಾರದ ಭರವಸೆ ನೀಡಿದ್ದರು. ಈವರೆಗೆ ಒಂದು ಪೈಸೆ ಕೂಡಾ ಬಂದಿಲ್ಲ ಎಂದು ಇಕ್ಬಾಲ್‌ ಹುಸೇನ್‌ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ ಅವರು, ಪರಿಹಾರ ಕೊಟ್ಟಿಲ್ಲ ಎನ್ನುವುದು ತಪ್ಪು ಮಾಹಿತಿ. ಎಲ್ಲ ಸಂತ್ರಸ್ತರಿಗೂ ತಾರತಮ್ಯ ಮಾಡದೇ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.