ADVERTISEMENT

ಸದನದಲ್ಲಿಂದು ರಾಯಣ್ಣ ಕಾವು: ಕಿಡಿಗೇಡಿ ಕೃತ್ಯಗಳ ಪ್ರಸ್ತಾಪ ಸಾಧ್ಯತೆ

ವಿಧಾನಮಂಡಲ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:41 IST
Last Updated 19 ಡಿಸೆಂಬರ್ 2021, 19:41 IST
ವಿಧಾನಮಂಡಲ ಅಧಿವೇಶನ
ವಿಧಾನಮಂಡಲ ಅಧಿವೇಶನ   

ಬೆಳಗಾವಿ: ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಘಟನೆಯಿಂದ ‘ಕುಂದಾ ನಗರಿ’ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಈ ವಿಷಯ ಭಾರಿ ವಾಕ್ಸಮರಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಎಂಇಎಸ್ ಅನ್ನು ಮಟ್ಟ ಹಾಕಬೇಕು ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದ ಮೇಲೆ ಪ್ರಹಾರ ನಡೆಸಲು ‘ಅಸ್ತ್ರ’ಗಳನ್ನು ಹರಿತ ಮಾಡಿಕೊಂಡಿವೆ.

ಇತ್ತ ಬೆಳಗಾವಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಿಷೇಧಾಜ್ಞೆ ಮುಂದುವರಿದಿದೆ.

ADVERTISEMENT

ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ದೀಪಕ್‌ ದಳವಿ ಮುಖಕ್ಕೆ ಮಸಿ ಎರಚಿದ ಬಳಿಕ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಟ್ಟು ಹಾಕಲಾಗಿತ್ತು. ಇದನ್ನು ಜೆಡಿಎಸ್‌ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿತ್ತು. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದರು. ಇದಕ್ಕೆ ಪ್ರತೀಕಾರವೆಂಬಂತೆ ಕಿಡಿಗೇಡಿಗಳು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದರು. ಬೆಂಗಳೂರಿನಿಂದ ಬಂದಿರುವ ಸರ್ಕಾರಿ ವಾಹನಗಳ ಮೇಲೆ ಎಂಇಎಸ್‌ ಕಾರ್ಯಕರ್ತರು ದಾಳಿ ನಡೆಸಿದ ಪ್ರಕರಣಗಳು ನಡೆದಿವೆ. ಈ ಘಟನೆಗಳಿಂದ ಬೆಳಗಾವಿಯಲ್ಲಿ ಆತಂಕ ನೆಲೆಸಿದೆ.

ಈ ಮಧ್ಯೆ ಕೆಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಾಗಿ ಬೆಂಗಳೂರಿನಿಂದ ವಾಹನಗಳಲ್ಲಿ ಬೆಳಗಾವಿಯತ್ತ ಹೊರಟಿರುವುದು ಪೊಲೀಸರಿಗೆ ತಲೆನೋವು ತಂದಿದೆ.

ಮಹಾರಾಷ್ಟ್ರ ಮತ್ತು ಎಂಇಎಸ್‌ನ ಕಿಡಿಗೇಡಿಗಳ ವರ್ತನೆಗಳ ಬಗ್ಗೆ ಜೆಡಿಎಸ್‌ ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸಲಿದೆ. ಮತ್ತೊಂದೆಡೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮತ್ತು ವಿಧಾನಪರಿಷತ್‌ ಸದಸ್ಯ ಆರ್‌.ಶಂಕರ್ ಅವರ ವಿರುದ್ಧ ಭೂಕಬಳಿಕೆ ಆರೋಪದ ವಿಷಯವನ್ನು ಮುಂದಿಟ್ಟುಕೊಂಡು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ, ಬೆಳಗಾವಿ ಘಟನೆ ಮುನ್ನೆಲೆಗೆ ಬಂದಿದೆ. ಶುಕ್ರವಾರ ಎರಡೂ ಸದನಗಳಲ್ಲಿ ಬೈರತಿ ವಿಷಯವಾಗಿ ಕಾಂಗ್ರೆಸ್‌ ಧರಣಿ ನಡೆಸಿ, ರಾಜೀನಾಮೆಗೆ ಆಗ್ರಹಿಸಿತ್ತು. ಸೋಮವಾರವೂ ಪಟ್ಟು ಮುಂದುವರೆಸಲು ತೀರ್ಮಾನಿಸಿತ್ತು. ಅಲ್ಲದೆ, ಶೇ 40 ಕಮಿಷನ್‌ ಮತ್ತು ಬಿಟ್‌ ಕಾಯಿನ್‌ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸುವ ಕಾಂಗ್ರೆಸ್‌ನ ಕಾರ್ಯತಂತ್ರ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲವೂ ಇದೆ.

ಕಾಂಗ್ರೆಸ್‌ ನಾಯಕರು ಎಂಇಎಸ್‌ ಮತ್ತು ಶಿವಸೇನೆಗಳ ಕಿಡಿಗೇಡಿ ವರ್ತನೆಯ ವಿಷಯವನ್ನು ಯಾವ ರೀತಿ ಪ್ರಸ್ತಾಪಿಸಲಿದ್ದಾರೆ ಮತ್ತು ಎಷ್ಟು ಮಹತ್ವ ನೀಡಲಿದ್ದಾರೆ ಎಂಬುದು ಸೋಮವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಲಿದೆ. ಮಹಾರಾಷ್ಟ್ರದಲ್ಲಿ ಶಿವಸೇವೆ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಭಾಗಿಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬೆಳಗಾವಿಯ ಎಂಇಎಸ್‌ಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

ಎಂಇಎಸ್‌ ನಡೆಸುತ್ತಿರುವ ಕೃತ್ಯಗಳ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರ ಸದನಕ್ಕೆ ಹಾಜರಾಗಿ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಮಧ್ಯೆ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಸಂಬಂಧ ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ವಿಪ್‌ ಹೊರಡಿಸಲೂ ಪಕ್ಷ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.