ADVERTISEMENT

ಹಗರಣಗಳನ್ನು ಮುಚ್ಚಿಕೊಳ್ಳಲು ಯತ್ನ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:00 IST
Last Updated 24 ಫೆಬ್ರುವರಿ 2023, 22:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಬಿಜೆಪಿ ಸರ್ಕಾರದ ವಿರುದ್ಧದ ಶೇಕಡಾ 40ರಷ್ಟು ಕಮಿಷನ್‌ ಆರೋಪ ಹಾಗೂ ಸಾಲು ಸಾಲಾಗಿ ಹೊರಬರುತ್ತಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಕಾವತಿ ಬಡಾವಣೆ ನಿರ್ಮಾಣ ಪ್ರಾರಂಭವಾದದ್ದು 2003ರಲ್ಲಿ. ನಾನು ಅಧಿಕಾರಕ್ಕೆ ಬರುವ ಮೊದಲೇ 2,750 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ 1,919 ಎಕರೆ 13 ಗುಂಟೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಹೈಕೋರ್ಟ್‌ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆ ಕುರಿತು ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಲಾಗಿತ್ತು’ ಎಂದರು.

‘ಅಧಿಕಾರಿಗಳು ವರದಿ ನೀಡುವಾಗ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿತ್ತು. ಆದ್ದರಿಂದ ಶೆಟ್ಟರ್‌ ಕಡತವನ್ನು ಅನುಮೋದಿಸಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹೈಕೋರ್ಟ್‌ನಲ್ಲಿ ಒಂದು ಅರ್ಜಿ ಬಾಕಿ ಇತ್ತು. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಪರಿಷ್ಕೃತ ಯೋಜನೆ ರೂಪಿಸಿರುವುದಾಗಿ ಅಧಿಕಾರಿಗಳು ವಿವರಿಸಿದರು. ಆ ಬಳಿಕ ನಾನು ಕಡತಕ್ಕೆ ಅನುಮೋದನೆ ನೀಡಿದೆ’ ಎಂದು ಹೇಳಿದರು.

ADVERTISEMENT

‘ಅದು ರೀ–ಡೂ ಅಲ್ಲ. ರೀ ಮಾಡಿಫೈಡ್‌ ಸ್ಕೀಂ. ನಮ್ಮ ಅವಧಿಯಲ್ಲಿ ಯಾವುದೇ ಜಮೀನಿನ ಡಿನೋಟಿಫಿಕೇಷನ್‌ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಗಿನ ವಿರೋಧ ಪಕ್ಷದ ನಾಯಕ ಶೆಟ್ಟರ್ ಆರೋಪ ಮಾಡಿದ್ದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಿದ್ದೆ. ಯಾವ ಅಕ್ರಮವೂ ನಡೆದಿಲ್ಲ ಎಂದು ಆಯೋಗ ಹೇಳಿದೆ. ಇದೆಲ್ಲವೂ ತಿಳಿಯದವರಂತೆ ಬೊಮ್ಮಾಯಿ ಆರೋಪ ಮಾಡಿದ್ದಾರೆ’ ಎಂದರು.

‘ಕೆಂಪಣ್ಣ ಆಯೋಗದ ವರದಿ ಪರಿಶೀಲನೆಗಾಗಿ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ಅಧ್ಯಕ್ಷತೆಯಲ್ಲಿ ಹೈಕೋರ್ಟ್‌ ಸಮಿತಿ ನೇಮಿಸಿದೆ. ನಿವೃತ್ತ ಐಎಎಸ್‌ ಅಧಿಕಾರಿ ಸಂದೀಪ್‌ ದವೆ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಎನ್‌.ಎಸ್‌. ಮೇಘರಿಕ್‌ ಸಮಿತಿಯಲ್ಲಿದ್ದಾರೆ. ವಿಷಯ ಈಗ ಸಮಿತಿಯ ಮುಂದಿದೆ. ಇಂತಹ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡುವುದು ಸರಿಯೆ’ ಎಂದು ಕೇಳಿದರು.

‘868 ಎಕರೆ ಡಿನೋಟಿಫೈ ಆಗಿದೆ ಎಂದು ಮುಖ್ಯಮಂತ್ರಿಯೇ ಸದನಕ್ಕೆ ಸುಳ್ಳು ಹೇಳಿದ್ದಾರೆ. ಎಕರೆಗೆ ₹ 10 ಕೋಟಿಯಂತೆ ₹ 8,000 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಏನೋ ನಡೆದಿದೆ ಎಂದು ಕಟ್ಟುಕತೆ ಸೃಷ್ಟಿಸುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ’ ಎಂದರು.

ಕಾನೂನು ಜ್ಞಾನ ಇಲ್ಲವೆ?

‘ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿದ್ದ ಕಾರಣದಿಂದ ಇತರ ರಾಜ್ಯಗಳಲ್ಲಿ ಇರುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೂ ಎಸಿಬಿ ಅಸ್ತಿತ್ವದಲ್ಲಿತ್ತು. ಹೈಕೋರ್ಟ್‌ ಆದೇಶದಂತೆ ಅದನ್ನು ರದ್ದು ಮಾಡಲಾಗಿದೆ. ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳಲ್ಲೂ ಎಸಿಬಿ ಇದೆ. ಇಲ್ಲಿ ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿ ವರ್ತಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ನನ್ನ ವಿರುದ್ಧ ಸಲ್ಲಿಕೆಯಾಗಿದ್ದ 59 ದೂರುಗಳಲ್ಲಿದ್ದ ಆರೋಪಗಳ ಕುರಿತು ‘ಬಿ’ ವರದಿಗಳು ಬಂದಿವೆ. ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಅದನ್ನು ಮಾಡದೇ ಈಗ ಎಲ್ಲರನ್ನೂ ಜೈಲಿಗೆ ಕಳಿಸುತ್ತೇವೆ ಎಂದು ಬಡಾಯಿ ಬಿಡುವುದನ್ನು ಜನ ನಂಬುವುದಿಲ್ಲ. ಮುಖ್ಯಮಂತ್ರಿಗೆ ಕಾನೂನಿನ ಜ್ಞಾನ ಇಲ್ಲವೆ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.