ADVERTISEMENT

ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಯಲಿದೆ: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2022, 6:26 IST
Last Updated 18 ಫೆಬ್ರುವರಿ 2022, 6:26 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು:‘ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹಾಗೊಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸದನದ ಒಳಗೆ ಮತ್ತು ಹೊರಗೆ ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ‘ಕೂ’ದಲ್ಲಿ ಈಶ್ವರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಿಕೆಶಿ, ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳುವುದು ದೇಶದ್ರೋಹವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ್ದಾರೆ.

‘ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ದೇಶದ ಹಿತಾಸಕ್ತಿ ಹಾಗೂ ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಭಾರತದ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 51ಎ ಹೇಳುತ್ತದೆ. ಜನಪ್ರತಿನಿಧಿಗಳಾಗಿ, ಭಾರತೀಯರಾಗಿ ನಾವು ರಾಷ್ಟ್ರಧ್ವಜಕ್ಕೆ ಅಪಮಾನ ಎಸಗುವ ಯಾವ ತಪ್ಪನ್ನೂ ಮಾಡಿಲ್ಲ’ ಎಂದು ಅವರು ಉಲ್ಲೇಖಿಸಿದ್ದಾರೆ.

ADVERTISEMENT

ಸಚಿವರಾಗಿ ಪ್ರಮಾಣ ಸ್ವೀಕರಿಸುವಾಗ ಸಂವಿಧಾನದ ಆಶಯಗಳಿಗೆ, ದೇಶದ ಹಿತಾಸಕ್ತಿಗೆ ಗೌರವ ತೋರಿ ನಡೆಯುವುದಾಗಿ ಪ್ರಮಾಣ ಮಾಡುತ್ತಾರೆ. ಹಾಗೆ ಪ್ರಮಾಣ ಮಾಡಿದ ಸಚಿವ ಈಶ್ವರಪ್ಪ ಅವರು ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳುವುದು ದೇಶದ್ರೋಹವಲ್ಲದೆ ಮತ್ತಿನ್ನೇನು? ಇಂಥ ಹೇಳಿಕೆ ನೀಡಿದ ಸಚಿವರ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕಿತ್ತು. ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕಿತ್ತು. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಕಾಂಗ್ರೆಸ್‌ ಪಕ್ಷದ ನಾಯಕರ ಸಣ್ಣ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಿ ಜೈಲಿಗಟ್ಟಿದ ಬಿಜೆಪಿ ಸರ್ಕಾರಕ್ಕೆ ಈಶ್ವರಪ್ಪ ಅವರ ಹೇಳಿಕೆಯಲ್ಲಿ ತಪ್ಪು ಕಾಣಿಸಲಿಲ್ಲವೇ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸಚಿವರೇ ತಾವು ಕೇಸರಿ ಧ್ವಜ, ಶಾಲನ್ನು ಸೂರತ್‌ನಿಂದ ತರಿಸಿ ಹಂಚಿದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಚಿವರು ಇಂದೂ ಕೂಡ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕನಿಷ್ಠ ಪಕ್ಷ ಈಗಲಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ಮೌನವಾಗಿರುವುದು ಏಕೆ? ವಿಧಾನಸಭಾ ಕಲಾಪಗಳು ಆರಂಭವಾಗುವ ಮುನ್ನ ಮುಖ್ಯಮಂತ್ರಿಗಳು ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹಾಗೊಂದುವೇಳೆ ಕ್ರಮ ಕೈಗೊಳ್ಳದಿದ್ದರೆ ಸದನದ ಒಳಗೆ ಮತ್ತು ಹೊರಗೆ ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ‘ಕೂ’ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.