ADVERTISEMENT

ನೆರೆ ಪರಿಹಾರಕ್ಕೆ ರಾಜ್ಯ ಬೊಕ್ಕಸದಿಂದಲೇ ಹಣ ಬಿಡುಗಡೆ ಮಾಡಿ: ಯಡಿಯೂರಪ್ಪ ಒತ್ತಾಯ

‘ಅನುದಾನಕ್ಕೆ ಕಾಯದೇ ರೈತರ ರಕ್ಷಣೆಗೆ ಧಾವಿಸಿ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:16 IST
Last Updated 15 ಡಿಸೆಂಬರ್ 2021, 22:16 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಳಗಾವಿ (ಸುವರ್ಣ ವಿಧಾನಸೌಧ): ಕೇಂದ್ರದ ಅನುದಾನಕ್ಕೆ ಕಾಯುವುದು ಬೇಡ. ಅತಿವೃಷ್ಟಿಯಿಂದ ತೊಂದರೆಗೊಳಗಾಗಿರುವ ರೈತರ ರಕ್ಷಣೆಗೆ ಮುಖ್ಯಮಂತ್ರಿ ಮುಂದಾಗಬೇಕು ಎಂದು ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದರು.

ನರೇಗಾ ಕಾರ್ಯಕ್ರಮದಡಿ ಕೆಲಸ ಮಾಡಿದವರಿಗೆ ಎರಡು ತಿಂಗಳ ವೇತನ ಪಾವತಿ ಮಾಡದ ಬಗ್ಗೆ ಯಡಿಯೂರಪ್ಪ ಅವರು ಪರೋಕ್ಷವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸಭೆಯಲ್ಲಿ ನಿಯಮ 69 ರಡಿ ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಯಡಿಯೂರಪ್ಪ, ‘ಮುಖ್ಯಮಂತ್ರಿಯವರ ಬಳಿ ಹಣಕಾಸು ಖಾತೆಯೂ ಇದೆ. ನೆರೆ ಪರಿಹಾರಕ್ಕೆ ರಾಜ್ಯ ಬೊಕ್ಕಸದಿಂದಲೇ ಹಣ ಬಿಡುಗಡೆ ಮಾಡಿ ರೈತರ ಸಂಕಷ್ಟ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದೇಶಪಾಂಡೆ ಅವರು ವಾಸ್ತವಿಕ ಸಂಗತಿಯನ್ನೇ ಮುಂದಿಟ್ಟಿದ್ದಾರೆ. 40– 50 ವರ್ಷಗಳಲ್ಲೇ ದೊಡ್ಡ ಪ್ರಮಾಣದ ಅತಿವೃಷ್ಟಿಯಿಂದಾಗಿ ರೈತ ಬೀದಿಪಾಲಾಗಿದ್ದಾನೆ. ಮುಖ್ಯಮಂತ್ರಿಯವರು ಕೇಂದ್ರದ ಹಣಕ್ಕಾಗಿ ಕಾದು ಕೂರುವುದು ಬೇಡ. ನರೇಗಾ ಅಡಿ ಕೆಲಸ ಮಾಡಿದವರಿಗೆ ಕೂಲಿ ಕೊಡದೇ ಇದ್ದರೆ ಆ ಬಡವ ಜೀವನ ಮಾಡುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಬಿತ್ತನೆ ಬೀಜ ಖರೀದಿಸಲು ರೈತನ ಜೇಬಿನಲ್ಲಿ ಹತ್ತು ರೂಪಾಯಿಯೂ ಇಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳಬೇಕು. ರಾಜ್ಯದ 224 ಕ್ಷೇತ್ರಗಳಲ್ಲೂ ಇದೇ ಸ್ಥಿತಿ ಇದೆ. ಎಲ್ಲ ಶಾಸಕರ ಅಭಿಪ್ರಾಯವೂ ಒಂದೇ’ ಎಂದು ಹೇಳಿದರು.

ಆರ್‌.ವಿ.ದೇಶಪಾಂಡೆ ಮಾತನಾಡಿ, ರಾಜ್ಯದಲ್ಲಿ ನರೇಗಾ ಅಡಿ ಕೆಲಸ ಮಾಡಿದವರಿಗೆ ಹಲವು ತಿಂಗಳಿಂದ ವೇತನ ಪಾವತಿ ಆಗುತ್ತಿಲ್ಲ. ಹೀಗಾದರೆ ರೈತ– ಕೂಲಿಕಾರ್ಮಿಕರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ಕೇಂದ್ರದಿಂದ ₹1,000 ಕೋಟಿ ಬಿಡುಗಡೆ ಆಗಿದ್ದು, ಹಳೇ ಬಾಕಿ ಪಾವತಿ ಮಾಡಲಾಗಿದೆ. ಎರಡು ತಿಂಗಳ ವೇತನ ಪಾವತಿ ಆಗಬೇಕಾಗಿದೆ. ಆದಷ್ಟು ಬೇಗ ಪಾವತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ನೀವು ಕೊಟ್ಟಿದ್ದು ಕಣ್ಣಿಗೆ ಕಾಣುತ್ತಿಲ್ಲ. ನಿರಂತರವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸಹಕಾರಿ ಸಾಲವನ್ನಾದರೂ ಮನ್ನಾ ಮಾಡಿ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅನ್ನದಾತನ ನೆರವಿಗೆ ಬರುವುದು ನಮ್ಮೆಲ್ಲರ ಕರ್ತವ್ಯ. ಪ್ರಧಾನಿ ಬಳಿ ಕರೆದೊಯ್ದು ರಾಜ್ಯದ ರೈತರ ಪರವಾಗಿ ವಿಶೇಷ ಪ್ಯಾಕೇಜ್‌ ಕೇಳೋಣ. ನಾವು ನಿಮ್ಮ ಜತೆ ಬರಲು ಸಿದ್ಧ’ ಎಂದು ದೇಶಪಾಂಡೆ ತಿಳಿಸಿದರು.

ಅತಿವೃಷ್ಟಿ ಕುರಿತು ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ, ಲಿಂಗೇಶ್‌, ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ, ಟಿ.ಡಿ.ರಾಜೇಗೌಡ, ಆನಂದ ನ್ಯಾಮಗೌಡ, ಬಿಜೆಪಿಯ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಇತರರು ಮಾತನಾಡಿದರು.

‘ಸರ್ಕಾರಕ್ಕೆ ಕಣ್ಣು–ಕಿವಿ ಇಲ್ಲಾಂದ್ರೆ ಎಲ್ಲಿ ಸಾಯಬೇಕು?’
‘ಈ ಸರ್ಕಾರಕ್ಕೆ ಕಣ್ಣು– ಕಿವಿ ಇಲ್ಲ ಅಂದ್ರೆ ನಾವು ಎಲ್ಲಿ ಹೋಗಿ ಸಾಯುಬೇಕು’– ಹೀಗೆಂದು ಪ್ರಶ್ನಿಸಿದ್ದು ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌.

ಅತಿವೃಷ್ಟಿಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ‘ನಮ್ಮ ಕ್ಷೇತ್ರದ ರೈತರು ಸರ್ಕಾರದ ಗಮನ ಸೆಳೆಯಲು ಖಾನಾಪುರದಿಂದ ಬೆಳಗಾವಿಗೆ ಪಾದಯಾತ್ರೆ ಮಾಡಿದ್ದಾರೆ. ಈಗಲೂ ಏನೂ ಮಾಡದಿದ್ದರೆ ಬೆಂಗಳೂರಿಗೂ ಪಾದಯಾತ್ರೆ ಮಾಡಲು ಸಿದ್ಧರಿದ್ದೇವೆ’ ಎಂದರು.

ಭಾರಿ ಮಳೆಯಿಂದ 3,632 ಹೆಕ್ಟೇರ್‌ ಪ್ರದೇಶದಲ್ಲಿದ್ದ ಭತ್ತದ ಬೆಳೆ ನಾಶವಾಗಿ ಹೋಗಿದೆ. ಎನ್‌ಡಿಆರ್‌ಎಫ್‌ ನೀಡುವ ಪರಿಹಾರ ಒಂದು ಗುಂಟೆಗೆ ₹68 ಮಾತ್ರ. ಇದು ಎಲ್ಲಿಗೆ ಸಾಲುತ್ತದೆ? ಅಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ 16 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಜವಾಬ್ದಾರರು ಯಾರು ಎಂದು ಅವರು ಪ್ರಶ್ನಿಸಿದರು.

ಎಲ್ಲಿದ್ದೀರಿ ಶಾಸಕರೇ....?
‘ಮಳೆ ಬಂದು ಹೊಲ, ಮನೆಗಳಿಗೆ ನೀರು ನುಗ್ಗಿದರೆ, ಅದರ ಚಿತ್ರ ಹಾಕಿ ಎಲ್ಲಿದ್ದೀರಿ ಶಾಸಕರೇ ಎಂದು ಪ್ರಶ್ನಿಸುತ್ತಾರೆ’ ಎಂದು ಅಳಲು ತೋಡಿಕೊಂಡವರು ಜೆಡಿಎಸ್‌ನಕೆ.ಎಂ.ಶಿವಲಿಂಗೇಗೌಡ.

‘ಜನ ನಮ್ಮನ್ನೇ ಟಾರ್ಗೆಟ್‌ ಮಾಡ್ತಾರೆ. ಕೇಂದ್ರದಿಂದ ಅನುದಾನ ಪಡೆದು ಕೆಲಸ ಮಾಡದೇ ಇದ್ದರೆ, ಇವರಿಂದ(ಶಾಸಕರು) ಏನೂ ಆಗಲ್ಲ ಎಂದು ಜನ ಹೇಳುತ್ತಾರೆ. ಶಾಸಕರ ಘನತೆ– ಗೌರವ ಹೋಗುತ್ತದೆ’ ಎಂದರು.

‘ಅತಿವೃಷ್ಟಿಯಿಂದ ನಮ್ಮ ಭಾಗದಲ್ಲಿ, ಚಾಪೆ ಹಾಕಿ ಮಲಗಿಸಿದ ಹಾಗೆ ರಾಗಿ ಮತ್ತು ಜೋಳದ ಪೈರುಗಳು ಮಲಗಿ ಹೋಗಿವೆ. ನೆಲದಲ್ಲೇ ಮೊಳಕೆಯೊಡೆದಿವೆ’ ಎಂದು ಗಮನ ಸೆಳೆದರು.

***

ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುತ್ತೀರಿ, ಏಕೆ ಕಣ್ಣು ತೆರೆಯುತ್ತಿಲ್ಲ. ಈ ಡಬಲ್ ಎಂಜಿನ್‌ಗೆ ಪೆಟ್ರೋಲ್‌ ಹಾಕಿ ಓಡಿಸುತ್ತೀರೋ, ಡೀಸೆಲ್ ಹಾಕಿ ಓಡಿಸುತ್ತೀರೋ?
–ಬಂಡೆಪ್ಪ ಕಾಶೆಂಪುರ್, ಜೆಡಿಎಸ್ ಉಪ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.