ADVERTISEMENT

ಅತಿವೃಷ್ಟಿಯಿಂದ ಬೆಳೆ ನಾಶ, ನಯಾಪೈಸೆ ನೆರವು ನೀಡದ ಕೇಂದ್ರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:15 IST
Last Updated 13 ಡಿಸೆಂಬರ್ 2021, 22:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ (ಸುವರ್ಣ ವಿಧಾನಸೌಧ): ‘ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿಯಿಂದಾಗಿ 12.5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಆದರೆ, ಕೇಂದ್ರ ಸರ್ಕಾರ ನಯಾಪೈಸೆ ನೆರವು ನೀಡಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ಹಾನಿ ಕುರಿತು ವಿಧಾನಸಭೆಯಲ್ಲಿ ಸೋಮವಾರ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ‘ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಶೇ 75ರಷ್ಟು ಬೆಳೆ ಹಾನಿಯಾಗಿದೆ. ಎಲ್ಲ ಬೆಳೆಗಳು ಬಹುತೇಕ ನಾಶ ಆಗಿವೆ. ಮಳೆಯಿಂದಾಗಿ ₹11,916 ಕೋಟಿ ನಷ್ಟ ಉಂಟಾಗಿದೆ ಎಂದು ಸರ್ಕಾರವೇ ಅಂದಾಜಿಸಿದೆ. ಕಳೆದ ಮೂರು ವರ್ಷಗಳಲ್ಲಿ ಮಳೆಯಿಂದಾಗಿ ₹2.5 ಲಕ್ಷ ಕೋಟಿ ನಷ್ಟ ಆಗಿದೆ’ ಎಂದು ಹೇಳಿದರು.

ಎರಡು ತಿಂಗಳಲ್ಲಿ ವಾಡಿಕೆ ಪ್ರಕಾರ 166 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 307 ಮಿ.ಮೀ ಮಳೆ ಆಗಿದೆ. ಅತಿವೃಷ್ಟಿಯಿಂದಾಗಿ ಜನರ ಬದುಕು ಛಿದ್ರ ಆಗಿದೆ. ಜನರು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಮಧ್ಯಪ್ರವೇಶಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ‘ಹೊಸಕೋಟೆಯಲ್ಲಿ ಕೆರೆಗಳು ತುಂಬದೆ 15 ವರ್ಷಗಳು ಕಳೆದಿದ್ದವು. ಈ ವರ್ಷ ಕೆರೆಗಳು ತುಂಬಿವೆ‘ ಎಂದರು. ಕೆ.ಸಿ. ವ್ಯಾಲಿ ಯೋಜನೆಯಿಂದಾಗಿ ಈ ಕೆರೆಗಳು ತುಂಬಿವೆ ಎಂದು ಕಾಂಗ್ರೆಸ್‌ ಸದಸ್ಯರು ಪ್ರತಿಪಾದಿಸಿದರು. ಕೆ.ಸಿ. ವ್ಯಾಲಿ ಯೋಜನೆಯಿಂದ ಹೊಸಕೋಟೆಗೆ ಸಿಕ್ಕಿದ್ದು 15 ಎಂಎಲ್‌ಡಿ ಮಾತ್ರ. ಕೆರೆ ತುಂಬಲು ಮಳೆಯೇ ಕಾರಣ ಎಂದು ಎಂಟಿಬಿ ನಾಗರಾಜ್‌ ಹೇಳಿದರು.

ADVERTISEMENT

ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ‘ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೊಸಕೋಟೆಯಲ್ಲಿ ಯಾವ ಕೆರೆಯೂ ಕೋಡಿ ಹರಿದಿಲ್ಲ’ ಎಂದು ಆಕ್ಷೇಪಿಸಿದರು. ಎಂಟಿಬಿ ನಾಗರಾಜ್‌, ‘ಹಾಗಿದ್ದರೆ ಶಾಸಕರು ಎರಡು ಕೆರೆಗಳಿಗೆ ಬಾಗಿನ ಅರ್ಪಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ‘ಕೆರೆಗಳು ತುಂಬಲು ಕೆ.ಸಿ.ವ್ಯಾಲಿ ಯೋಜನೆಯೇ ಕಾರಣ. ಕೋಲಾರದಲ್ಲಿ ಈ ಹಿಂದೆ 1,200 ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಈಗ 200 ಅಡಿಗೆ ನೀರು ಸಿಗುತ್ತಿದೆ’ ಎಂದರು.

‘ರಾಜ್ಯದಲ್ಲಿ 2013–14ರಲ್ಲಿ ₹4 ಸಾವಿರ ಕೋಟಿ ಅಬಕಾರಿ ಸುಂಕ ಸಂಗ್ರಹ ಆಗುತ್ತಿತ್ತು. ಈಗ ₹36,000 ಕೋಟಿ ಸಂಗ್ರಹ ಆಗುತ್ತಿದೆ. ಇದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ’ ಎಂದರು. ಅತಿವೃಷ್ಟಿ ಬಗ್ಗೆ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿ ಕೊಡುವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ನನ್ನ ಹಾಗೂ ಸ್ಪೀಕರ್‌ ನಡುವೆ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ. ಮಳೆ ಹಾನಿ ಬಗ್ಗೆ ಮಂಗಳವಾರ ವಿಸ್ತೃತವಾಗಿ ಚರ್ಚೆ ನಡೆಸೋಣ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.