ADVERTISEMENT

ಕೃಷಿ ಉದ್ದೇಶಕ್ಕೆ ಕನಿಷ್ಠ ವಿಸ್ತೀರ್ಣ ಮಿತಿ ಸಡಿಲಿಕೆ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:57 IST
Last Updated 13 ಡಿಸೆಂಬರ್ 2021, 21:57 IST

ಬೆಳಗಾವಿ (ಸುವರ್ಣ ವಿಧಾನಸೌಧ): ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉದ್ದೇಶಕ್ಕಾಗಿಯೇ ಬಳಸುವ ಜಮೀನುಗಳಿಗೆ ಕನಿಷ್ಠ ವಿಸ್ತೀರ್ಣ ಮಿತಿಯಿಂದ ವಿನಾಯಿತಿ ನೀಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಗಮನ ಸೆಳೆಯುವ ಸೂಚನೆ ಮಂಡಿಸಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮೂರು ಗುಂಟೆ ಹಾಗೂ ಉಳಿದ ಎಲ್ಲ ಜಿಲ್ಲೆಗಳಲ್ಲಿ ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನುಗಳನ್ನು ಪರಭಾರೆ ಮಾಡಿರುವುದನ್ನು ನಿಷೇಧಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಹಳ್ಳಿಯ ಜನರಿಗೆ ತೊಂದರೆ ಆಗುತ್ತಿದೆ. ತಕ್ಷಣವೇ ಈ ಮಿತಿಯನ್ನು ಸಡಿಲಿಸಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರ ನೀಡಿದ ಮಾಧುಸ್ವಾಮಿ, ‘ನಗರ ಪ್ರದೇಶಗಳಲ್ಲಿ ಜಮೀನುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ವಿಭಜಿಸಿ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಅವು ನಂತರದಲ್ಲಿ ಕಂದಾಯ ನಿವೇಶನಗಳಾಗಿ ನೋಂದಣಿ ಆಗುತ್ತಿವೆ. ಇದರಿಂದ ಯೋಜಿತ ನಗರಾಭಿವೃದ್ಧಿಗೆ ಅಡ್ಡಿಯಾಗಿದೆ. ಕಂದಾಯ ನಿವೇಶನಗಳ ನೋಂದಣಿ ಮತ್ತು ಬಳಕೆ ನಿಯಂತ್ರಿಸಲು ಈ ಆದೇಶ ಹೊರಡಿಸಲಾಗಿದೆ’ ಎಂದರು.

ADVERTISEMENT

‘ಕಂದಾಯ ನಿವೇಶನಗಳ ಹಾವಳಿ ಇರುವುದು ನಗರಗಳಲ್ಲಿ. ಗ್ರಾಮೀಣ ಪ್ರದೇಶದಲ್ಲಿ ಅಂತಹ ಸಮಸ್ಯೆ ಇಲ್ಲ. ಈಗ ವಿಧಿಸಿರುವ ಮಿತಿಯಿಂದ ಹಳ್ಳಿಯ ಜನರು ಕೃಷಿ ಉದ್ದೇಶಕ್ಕಾಗಿ ತುಂಡು ಜಮೀನು ಖರೀದಿಸಲಾಗದ ಮತ್ತು ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಲು ಆಗದ ಸ್ಥಿತಿಯಲ್ಲಿದ್ದಾರೆ. ಕೃಷಿ ಉದ್ದೇಶಕ್ಕೆ ಬಳಸುವ ಜಮೀನುಗಳಿಗೆ ಕನಿಷ್ಠ ವಿಸ್ತೀರ್ಣ ಮಿತಿ ಆದೇಶದಿಂದ ವಿನಾಯಿತಿ ನೀಡಬೇಕು’ ಎಂದು ಶ್ರೀಕಂಠೇಗೌಡ ಒತ್ತಾಯಿಸಿದರು.

ಕೃಷಿ ಉದ್ದೇಶಕ್ಕೆ ಸೀಮಿತವಾಗಿ ಕನಿಷ್ಠ ವಿಸ್ತೀರ್ಣ ಮಿತಿಯಿಂದ ವಿನಾಯಿತಿ ನೀಡಲು ಸರ್ಕಾರ ಸಿದ್ಧವಾಗಿದೆ. ಕಂದಾಯ ಸಚಿವರ ಜತೆ ಈ ಕುರಿತು ಚರ್ಚಿಸಿ, ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.