ADVERTISEMENT

ಬೆಳಗಾವಿ ಅಧಿವೇಶನ: ಗಾಲಿ ರೆಡ್ಡಿ–ನಾರಾ ರೆಡ್ಡಿ ಪರಸ್ಪರ ಬೈದಾಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 23:30 IST
Last Updated 12 ಡಿಸೆಂಬರ್ 2023, 23:30 IST
ಬೆಳಗಾವಿ ಸುವರ್ಣ ವಿಧಾನ ಸೌಧ
ಬೆಳಗಾವಿ ಸುವರ್ಣ ವಿಧಾನ ಸೌಧ   

ಬೆಳಗಾವಿ: ಬಳ್ಳಾರಿಯ ಅಭಿವೃದ್ಧಿ ಮತ್ತು ರೈತರನ್ನು ಬೆದರಿಸಿ ಜಮೀನು ಸ್ವಾಧೀನ ಪಡಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸದಸ್ಯ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್‌ನ ನಾರಾ ಭರತ್ ರೆಡ್ಡಿ ಪರಸ್ಪರ ಬೈದಾಡಿಕೊಂಡು, ಒಬ್ಬರ ಮೇಲೊಬ್ಬರು ಮುಗಿಬಿದ್ದ ಪ್ರಸಂಗ ಮಂಗಳವಾರ ನಡೆಯಿತು.

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಜನಾರ್ದನ ರೆಡ್ಡಿ, 13 ವರ್ಷದ ಹಿಂದೆ ತಾನು ಮಂತ್ರಿಯಾಗಿದ್ದಾಗ ಹತ್ತಾರು ಯೋಜನೆ ರೂಪಿಸಿದ್ದೆ. ನಂತರ ಬಂದವರು ಅದನ್ನು ಮುಂದುವರಿಸಲಿಲ್ಲ ಎಂದು ಹೇಳಿದ್ದರು.

ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಭರತ್ ರೆಡ್ಡಿ, ಬ್ರಹ್ಮಿಣಿ ಸ್ಟೀಲ್ ಆರಂಭಿಸುವುದಾಗಿ 10–15 ಸಾವಿರ ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆದಿದ್ದರು. ರೈತರು ಕೊಡಲು ಒಪ್ಪದಿದ್ದಾಗ ಗೂಂಡಾಗಿರಿ ನಡೆಸಿ ವಶಪಡಿಸಿಕೊಂಡಿದ್ದರು. ಬಳಿಕ, ಅದನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಂಡಿದ್ದಲ್ಲದೇ ಬಳಿಕ ಬೇರೆ ಕಂಪನಿಗೆ ಮಾರಿದ್ದರು. ತಮ್ಮ ಜಮೀನಿಗೆ ಹೆಚ್ಚಿನ ಬೆಲೆ ಬರಲಿದೆ ಎಂಬ ಕಾರಣಕ್ಕೆ ನಿರ್ದಿಷ್ಟ ಪ್ರದೇಶದಲ್ಲಿಯೇ ವಿಮಾನ ನಿಲ್ದಾಣಕ್ಕೆ ಜಾಗ ಗೊತ್ತು ಮಾಡಿಸಿದ್ದರು. ಜಾಗ ಬಿಟ್ಟುಕೊಡದ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದರು. ಈಗ ಬಂದು ಅಭಿವೃದ್ಧಿಯ ಮಾತನಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿಯವರ ಹೆಸರು ಹೇಳದೇ ಕುಟುಕಿದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ, ಜನಾರ್ದನ ರೆಡ್ಡಿ, ‘ಅವನಿಗೆ ತಲೆ ಇಲ್ಲ, ಏನೇನೋ ಮಾತನಾಡುತ್ತಾನೆ’ ಎಂದು ರೇಗಿದರು. ಈ ಮಾತಿಗೆ ಸಿಟ್ಟಾದ ಭರತ್ ರೆಡ್ಡಿ, ‘ನಿನಗೆ ತಲೆ ಇಲ್ಲ. ಕರ್ನಾಟಕದ ಗಡಿಭಾಗವನ್ನು ಆಂಧ್ರಕ್ಕೆ ಸೇರಿಸಿದ್ದು ನೀನೇ. ಕೂತ್ಕೊಳಯ್ಯ ತೆಪ್ಪಗೆ. ಕರ್ನಾಟಕದ ಜನರಿಗೆ ಏನೇನು ಮೋಸ ಮಾಡಿದ್ದೀಯ ಎಂದು ಇಲ್ಲೇ ದಾಖಲೆ ಬಿಚ್ಚಿಡುತ್ತೇನೆ. ತರ್ತೀನಿ ಬಾ’ ಎಂದು ಕೂಗಾಡಿದರು.

‘ಇವನ ಅಪ್ಪ ಇಪ್ಪತ್ತು ವರ್ಷ ಮನೆಯಿಂದ ಹೊರಗೇ ಬಾರದೇ ಕುಳಿತಿದ್ದ. ಅವನು ಕೂತಿದ್ದ ಎಂದು ಇವ ಈಗ ಬಂದಿದ್ದಾನೆ’ ಎಂದು ಜನಾರ್ದನ ರೆಡ್ಡಿ ಹೇಳಿದರು. ಸಚಿವ ಬಿ. ನಾಗೇಂದ್ರ ಸೇರಿದಂತೆ ಕಾಂಗ್ರೆಸ್ ಸದಸ್ಯರು ಭರತ್ ರೆಡ್ಡಿ ಬೆಂಬಲಕ್ಕೆ ನಿಂತರು. ತೀವ್ರ ವಾಕ್ಸಮರ ನಡೆಯಿತು.

ಮಧ್ಯ ಪ್ರವೇಶಿಸಿದ ಸಚಿವ ನಾಗೇಂದ್ರ, ‘ಸದನದ ಸದಸ್ಯರೊಬ್ಬರು ನಮಗೆ ನೋವುಂಟು ಮಾಡಿದ್ದಾರೆ. ಗಡಿಭಾಗದಲ್ಲಿ ಏನು ನಡೆದಿದೆ. ಜಮೀನು ಕಳೆದುಕೊಂಡ ರೈತರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಗಡಿಯಲ್ಲಿ ತಪ್ಪು ಮಾಡಿದವರನ್ನು ಶಿಕ್ಷಿಸದೇ ಬಿಡುವುದಿಲ್ಲ’ ಎಂದು ಹೇಳಿ ಚರ್ಚೆಯನ್ನು ಕೊನೆಗಾಣಿಸಿದರು.

ಅದಕ್ಕೂ ಮೊದಲು ಜನಾರ್ದನ ರೆಡ್ಡಿ ಮಾತನಾಡುವಾಗ, ತಾವು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದರು. ಇದನ್ನು ಕಾಂಗ್ರೆಸ್‌ನ ಈ. ತುಕಾರಾಂ ಆಕ್ಷೇಪಿಸಿದರು. ಇಬ್ಬರ ಮಧ್ಯೆ ವಾಕ್ಸಮರವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.