ADVERTISEMENT

Karnataka Bandh | ಬಂದ್‌ ನೀರಸ: ಪ್ರತಿಭಟನೆಗೆ ಸೀಮಿತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 15:28 IST
Last Updated 22 ಮಾರ್ಚ್ 2025, 15:28 IST
ಬೆಳಗಾವಿ ನಗರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ನಿಂತಿದ್ದರು
ಬೆಳಗಾವಿ ನಗರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ನಿಂತಿದ್ದರು   

ಬೆಂಗಳೂರು: ಕೆಎಸ್ಆರ್‌ಟಿಸಿ ಬಸ್‌ ಚಾಲಕ, ನಿರ್ವಾಹಕರ ಮೇಲೆ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜನರು ಸ್ಪಂದಿಸಿಲ್ಲ.

ವಾಟಾಳ್ ನಾಗರಾಜ್‌ ಮತ್ತಿತರರು ಕರೆ ನೀಡಿದ್ದ ಬಂದ್‌ಗೆ ಇತರ ಕನ್ನಡಪರ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದ್ದವು. ರಾಜ್ಯದ ಯಾವುದೇ ಸ್ಥಳಗಳಲ್ಲಿ ಬಂದ್‌ ಆಗಿಲ್ಲ. ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಪುರಭವನದ ಬಳಿ ಸಣ್ಣ ಮಟ್ಟದ ಪ್ರತಿಭಟನೆಗಳು ನಡೆದವು.

ಮೈಸೂರು, ಮಂಡ್ಯ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ರ‍್ಯಾಲಿ ನಡೆಸಿ, ಅಂಗಡಿ ಮುಚ್ಚಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ಉಳಿದಂತೆ ವಿವಿಧೆಡೆ ಎಂಇಎಸ್‌, ಶಿವಸೇನಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆದಿವೆ.

ADVERTISEMENT

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳದಲ್ಲಿ ಬಂದ್‌ನ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ. ಜನಜೀವನ ಎಂದಿನಂತಿತ್ತು. ಬಂದ್‌ಗೆ ಕರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಬೀದರ್ ನಗರ ಸೇರಿದಂತೆ ಜಿಲ್ಲೆಯ ಮೂಲಕ ಸಂಚರಿಸಿದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

ರಾಜ್ಯ ಸಾರಿಗೆ ನಿಗಮಗಳ ಬಸ್‌ಗಳು ಎಂದಿನಿಂತೆ ಕಾರ್ಯಾಚರಣೆ ನಡೆಸಿದವು. ಬೆಂಗಳೂರಿನ ಮೆಜೆಸ್ಟಿಕ್‌, ಮೈಸೂರು ರಸ್ತೆ ಸ್ಯಾಟಲೈಟ್, ಶಾಂತಿನಗರ ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳು ಪ್ಲಾಟ್‌ಫಾರಂಗಳಲ್ಲಿ ನಿಂತಿದ್ದವು. ಪ್ರಯಾಣಿಕರಿರಲಿಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲೂ ಇದೇ ಸ್ಥಿತಿ ಇತ್ತು. ಮಧ್ಯಾಹ್ನ ಸಹಜ ಸ್ಥಿತಿಗೆ ಮರಳಿತು.

ರಸ್ತೆಗಳಲ್ಲಿ ಜನರು, ವಾಹನಗಳ ಓಡಾಟ ಕಡಿಮೆ ಇತ್ತು. ಬಿಎಂಟಿಸಿ ಬಸ್‌ಗಳು ಖಾಲಿ ಓಡಾಡುತ್ತಿದ್ದವು, ಓಲಾ, ಉಬರ್‌ ಬಂದ್‌ಗೆ ಬೆಂಬಲ ಸೂಚಿಸಿದ್ದವು. ಆಟೊಗಳ ಸಂಖ್ಯೆಯೂ ಕಡಿಮೆ ಇತ್ತು. 

ವಿಮಾನ ನಿಲ್ದಾಣದಲ್ಲಿ ದಟ್ಟಣೆ
ದೇವನಹಳ್ಳಿ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 8ಗಂಟೆ ನಂತರ ಓಲಾ, ಉಬರ್ ಕ್ಯಾಬ್‌ ಸಂಚಾರ ಇರುವುದಿಲ್ಲ ಎಂದು ಪ್ರಯಾಣಿಕರು ಬೆಳಗ್ಗೆಯೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ವಿಮಾನ ನಿಲ್ದಾಣದ ಡ್ರಾಪ್‌ ಪಾಯಿಂಟ್‌ನಲ್ಲಿ ದಟ್ಟಣೆ ಇತ್ತು. ಟರ್ಮಿನಲ್‌ಗಳ ಮುಂದೆ ಜನರ ದಂಡೇ ನೆರೆದಿತ್ತು. ಬಿಎಂಟಿಸಿ ವಾಯುವಜ್ರ ಬಸ್‌ಗಳು ಸಂಚರಿಸಿದವು. ಮಧ್ಯಾಹ್ನದ ಹೊತ್ತಿಗೆ ಟ್ಯಾಕ್ಸಿ ಆರಂಭದೊಂದಿಗೆ ವಿಮಾನ ನಿಲ್ದಾಣ ಯಥಾಸ್ಥಿತಿಗೆ ಮರಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.