ADVERTISEMENT

ಇದೇ ಮೊದಲ ಬಾರಿ ಮಹಿಳೆಗೆ ಬ್ಯಾರಿ ಅಕಾಡೆಮಿಯ ಪ್ರಶಸ್ತಿ ‘ಗೌರವ’

ಝಲೇಖ ಮುಮ್ತಾಜ್‌ ಸಹಿತ ಮೂವರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 11:14 IST
Last Updated 25 ಜುಲೈ 2019, 11:14 IST
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು. ಖಾಲಿದ್ ತಣ್ಣೀರು ಬಾವಿ, ಝಲೇಖ ಮುಮ್ತಾಜ್ ಮತ್ತು ನೂರ್ ಮುಹಮ್ಮದ್
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು. ಖಾಲಿದ್ ತಣ್ಣೀರು ಬಾವಿ, ಝಲೇಖ ಮುಮ್ತಾಜ್ ಮತ್ತು ನೂರ್ ಮುಹಮ್ಮದ್   

ಮಂಗಳೂರು: ಸಾಹಿತಿ ಝಲೇಖ ಮಮ್ತಾಜ್‌ ಸಹಿತ ಮೂವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಅಕಾಡೆಮಿಯ ಈ ಗೌರವಕ್ಕೆ ಮಹಿಳೆ ಪಾತ್ರರಾಗುತ್ತಿರುವುದು ಇದೇ ಮೊದಲು.

ಬ್ಯಾರಿ ಗಾಯಕ–ಕಲಾವಿದ ಖಾಲಿದ್ ತಣ್ಣೀರುಬಾವಿ ಹಾಗೂ ಬ್ಯಾರಿ ಜಾನಪದ ಕಲಾವಿದ ನೂರ್ ಮಹಮ್ಮದ್ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿಯು ₹50 ಸಾವಿರ ನಗದು ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2008ರಿಂದ ಅಕಾಡೆಮಿಯು ಪ್ರತಿ ವರ್ಷ ಮೂವರಿಗೆ ‘ಗೌರವ ಪ್ರಶಸ್ತಿ’ ನೀಡುತ್ತಿದ್ದು, 30 ಮಂದಿ ಪಾತ್ರರಾಗಿದ್ದಾರೆ. 11ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳೆಯೊಬ್ಬರು ಗೌರವ ಸ್ವೀಕರಿಸಲಿದ್ದಾರೆ.

ADVERTISEMENT

‘ಬ್ಯಾರಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಗಾಧವಾಗಿದೆ. ಈ ಬಾರಿ ಅವರ ಕೊಡುಗೆಯನ್ನು ಗುರುತಿಸಿ ನಾವು ಪ್ರಶಸ್ತಿ ನೀಡುತ್ತಿದ್ದು, ನಮಗೆ ಗೌರವ ತಂದಿದೆ’ ಎಂದು ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮದ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರಶಸ್ತಿ ಪ್ರದಾನ ಸಮಾರಂಭದ ದಿನವನ್ನು ಶೀಘ್ರವೇ ನಿರ್ಧರಿಸಲಾಗುವುದು. ಈ ಸಮಾರಂಭದಲ್ಲಿ ಜೀವರಕ್ಷಕ ವಿ. ಮುಹಮ್ಮದ್ ಹಾಗೂ ಸಮಾಜಸೇವಕ ಬಿ.ಎಂ. ಉಮ್ಮರ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರವು ಯಾವುದೇ ನಗದನ್ನು ಹೊಂದಿಲ್ಲ’ ಎಂದರು.

ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈಬಿ. ಸದಸ್ಯ ಬಶೀರ್ ಬೈಕಂಪಾಡಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಅಬ್ದುಲ್ ರಜಾಕ್ ಅನಂತಾಡಿ ಇದ್ದರು.

ಝಲೇಖ ಮುಮ್ತಾಜ್ (ಬ್ಯಾರಿ ಸಾಹಿತ್ಯ ಕ್ಷೇತ್ರ):

ಮಂಗಳೂರಿನ ಝಲೇಖ ಬ್ಯಾರಿ ಬರಹ, ಲೇಖನ, ಚುಟುಕು, ಕವನಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಭ್ರೂಣ ಹತ್ಯೆ, ಉಮ್ಮರೋ ನೆನಪು, ಉಮ್ಮ ಬಾಸೆ, ಭಾರತ ನಙಲೊ ದೇಶ, ಅಲ್ಲಾಹುರೊ ಸೃಷ್ಟಿ ಇವರ ಪ್ರಮುಖ ಕವನಗಳಾಗಿವೆ. ತಲಾಕ್ ಒರು ಸಮಸ್ಯೆ, ಮಕ್ಕಗ್ ಬೇನಾಯೊ ಮೌಲ್ಯಾದಾರಿತ ಶಿಕ್ಷಣ, ನಙಲೆ ಮಕ್ಕಲೊ ಭವಿಷ್ಯ, ವಿಜ್ಞಾನತೊ ಕೊಡುಗೆಙ, ಸ್ವಾತಂತ್ರೈ ಪಡೆ ಒರು ನೆನಪು, ಪೆನ್ನ ಸಂಸಾರತ್ತೊ ಕಣ್ಣ್ ಪ್ರಮುಖ ಬರಹಗಳು. ವಿವಿಧ ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಶಿವಮೊಗ್ಗದ ಕೋಣಂದೂರಿನ ಝಲೇಖ ಹತ್ತನೇ ತರಗತಿ ಕಲಿತಿದ್ದು, ಝಾಕೀರ್‌ ಹುಸೈನ್ ಜೊತೆ ವಿವಾಹವಾಗಿದ್ದು, ಗೃಹಿಣಿಯಾಗಿ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಖಾಲಿದ್ ತಣ್ಣೀರುಬಾವಿ (ಬ್ಯಾರಿ ಕಲೆ ಕ್ಷೇತ್ರ):

ಮಂಗಳೂರಿನ ಖಾಲಿದ್ ನಾಲ್ಕಕ್ಕೂ ಅಧಿಕ ದಶಕಗಳಿಂದ ಬ್ಯಾರಿ, ತುಳು ಹಾಗೂ ಸಾಹಿತ್ಯದ ಸಂಗೀತವನ್ನು ಹಾಡುತ್ತಿದ್ದಾರೆ. ಆಕಾಶವಾಣಿ, ಟಿವಿ ವಾಹಿನಿಗಳಲ್ಲಿ ಇವರ ಹಾಡುಗಳು ಬಿತ್ತರಗೊಂಡಿವೆ. ಸಂಗೀತದ ಮೂಲಕ ಭಾಷೆ ಹಾಗೂ ಅದರ ತಿರುಳನ್ನು ಪಸರಿಸಿದ ಅವರ ಸೇವೆಯನ್ನು ಗುರುತಿಸಿ, ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.

ನೂರ್ ಮುಹಮ್ಮದ್ (ಬ್ಯಾರಿ ಜಾನಪದ ಕ್ಷೇತ್ರ):

ಮೂಲ್ಕಿ ಬಳಿಯ ಕಾರ್ನಾಡ್‌ನ ನೂರ್ ಮುಹಮ್ಮದ್ ಬ್ಯಾರಿ ಜಾನಪದ ಕಲೆಯಾದ ದಫ್‌ ಉಸ್ತಾದ್‌ . ಸುಮಾರು ನಾಲ್ಕು ದಶಕಗಳಲ್ಲಿ ವಿವಿಧೆಡೆ ದಫ್‌ ಕಲಾ ಪ್ರದರ್ಶನ ನೀಡಿದ್ದಾರೆ. ತಾಳ, ಹಾಡು, ನೃತ್ಯದ ಮೂಲಕ ಸಾಹಿತ್ಯವನ್ನು ಪಸರಿಸುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಫ್ ಕಲಿಸಿದ್ದು, ಅವರೂ ಬ್ಯಾರಿ ಸಾಹಿತ್ಯ –ಸಂಸ್ಕೃತಿ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.