ಸಿ.ಟಿ. ರವಿ
(ಚಿತ್ರ ಕೃಪೆ: X/@CTRavi_BJP)
ಬೆಂಗಳೂರು: 'ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದ್ದು, ಪೊಲೀಸ್ ವಾಹನದಲ್ಲಿ ನಿರ್ಜನ ಪ್ರದೇಶದಲ್ಲಿ ಸುತ್ತಾಡಿಸಿದ್ದಾರೆ. ನನಗಾಗುವ ಎಲ್ಲ ತೊಂದರೆಗೆ ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಸರ್ಕಾರವೇ ಹೊಣೆ' ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೊ ಸಹಿತ ಪೋಸ್ಟ್ ಹಂಚಿದ್ದಾರೆ.
'ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
'ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್‌ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೆಸ್ ಸರ್ಕಾರವೇ ಕಾರಣ' ಎಂದು ಹೇಳಿದ್ದಾರೆ.
ಮಗದೊಂದು ಪೋಸ್ಟ್‌ನಲ್ಲಿ ತಲೆಗೆ ಆದ ಗಾಯದ ಚಿತ್ರವನ್ನು ಹಂಚಿರುವ ಸಿ.ಟಿ. ರವಿ, 'ಕರ್ನಾಟಕದಲ್ಲಿ ಯಾರೂ ಕೂಡ ಸುರಕ್ಷಿತರಲ್ಲ' ಎಂದು ಹೇಳಿದ್ದಾರೆ.
'ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು ಯಾಕೆ? ನನ್ನನ್ನು ಕೊಲೆ ಮಾಡುವುದೇ ನಿಮ್ಮ ಉದ್ದೇಶ. ಇಲ್ಲಂದ್ರೆ ಯಾಕೆ ಸುತ್ತಾಡಿಸಿಕೊಂಡು ಬಂದಿದ್ದೀರಾ' ಎಂದು ಅವರು ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಪರಿಷತ್ತಿನಲ್ಲಿ ಮಾತಿನ ಚಕಮಕಿ ವೇಳೆ ರವಿ ಆಡಿದ ಮಾತು ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ವಿಧಾನಸೌಧದಿಂದ ಹೊರಗೆ ಹೊರಟು ಪ್ರವೇಶ ದ್ವಾರದ ಕಾರಿಡಾರ್‌ನಲ್ಲಿ ಹೋಗುತ್ತಿದ್ದ ರವಿ ಅವರ ಮೇಲೆ ಕೆಲವರು ನುಗ್ಗಿ ಹಲ್ಲೆಗೆ ಯತ್ನ ನಡೆಸಿದ ಘಟನೆಯೂ ನಡೆದಿತ್ತು.
ಸಿ.ಟಿ. ರವಿ ತಡರಾತ್ರಿ ಬೆಂಗಳೂರಿಗೆ...
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಅವಾಚ್ಯ ಪದವನ್ನು ಬಳಸಿ ನಿಂದಿಸಿದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಗುರುವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದೊಯ್ಯಲಾಯಿತು. ತಡರಾತ್ರಿ ಠಾಣೆಯಿಂದ ಪೊಲೀಸರು ರವಿ ಅವರನ್ನು ಹೊತ್ತು ತಂದರು. ಆಗ ಅವರ ತಲೆಗೆ ಪೆಟ್ಟು ಬಿದ್ದಿದ್ದು, ರಕ್ತ ಸೋರಿದ್ದ ಗುರುತು ಕಂಡುಬಂದಿತು. ಆದರೆ, ಅವರಿಗೆ ಯಾವ ರೀತಿ ಪೆಟ್ಟುಬಿದ್ದಿತು ಎಂಬುದು ಸ್ಪಷ್ಟವಾಗಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಖಾನಾಪುರ ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದು, ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.