ADVERTISEMENT

ಅಧಿಕಾರಕ್ಕಾಗಿ ಗಾಂಧಿ ಕುಟುಂಬದ ಅಂಗಳದಲ್ಲಿ ಕುಳಿತಿಲ್ಲವೇ ಸಿದ್ದರಾಮಯ್ಯ?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2021, 10:31 IST
Last Updated 3 ಆಗಸ್ಟ್ 2021, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದೇಪದೇದೆಹಲಿಗೆ ಭೇಟಿ ನೀಡುವುದೇಕೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ನೀವು (ಸಿದ್ದರಾಮಯ್ಯ) ಗಾಂಧಿ ಕುಟುಂಬದ ಮನೆ ಅಂಗಳದಲ್ಲಿ ವಾರಗಟ್ಟಲೆ ಕುಳಿತಿರಲಿಲ್ಲವೇ ಎಂದು ಬಿಜೆಪಿಯ ಕರ್ನಾಟಕ ಘಟಕ ಟ್ವೀಟ್ ಮಾಡಿದೆ.

‘ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ಮೂಲ ಕಾಂಗ್ರೆಸಿಗರೆಲ್ಲ ಸೇರಿ ನಿಮ್ಮ ಕುರ್ಚಿ ಬುಡ ಅಲ್ಲಾಡಿಸಿದ್ದರು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯದ ಹಿತ ಮರೆತು ನೀವು ಗಾಂಧಿ ಕುಟುಂಬದ ಮನೆ ಅಂಗಳದಲ್ಲಿ ವಾರಗಟ್ಟಲೇ ಬೀಡುಬಿಟ್ಟಿದ್ದು ಮರೆತೇ ಹೋಯ್ತೇ’ ಎಂದು #ಬುರುಡೆರಾಮಯ್ಯ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

‘ನೀವೇ ಖುದ್ದು ಪಕ್ಷಾಂತರಿ ಹಾಗೂ ವಲಸಿಗ. ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರು ಇಂದಿರಾ ಗಾಂಧಿ ವಿರುದ್ಧ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೊನೆಗೆ ಅವರ ಸಂಪುಟದಲ್ಲೇ ಮಂತ್ರಿಯಾಗಿದ್ದರು. ಬಂಗಾರಪ್ಪ ಎಷ್ಟು ಬಾರಿ ಪಕ್ಷ ಬದಲಿಸಿದರೆಂಬುದು ನಿಮಗೆ ಗೊತ್ತಲ್ಲವೇ?’ ಎಂದು ಸಿದ್ದರಾಮಯ್ಯನವರನ್ನು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್‌ನಲ್ಲಿ ತಾನೊಬ್ಬನೇ ಗೆಲ್ಲುವ ಅಭ್ಯರ್ಥಿ ಎಂಬ ಭ್ರಮೆಯಿಂದ ಸಿದ್ದರಾಮಯ್ಯ ಹೋದಲೆಲ್ಲಾ 224 ಕ್ಷೇತ್ರಗಳಲ್ಲೂ ತಾನು ಸ್ಪರ್ಧಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ‌. ದೇಶದಿಂದ ಕಾಂಗ್ರೆಸ್ ಮುಕ್ತವಾಗಿಸಲು ರಾಷ್ಟ್ರಮಟ್ಟದಲ್ಲಿ ರಾಹುಲ್ ಶ್ರಮಿಸುತ್ತಿದ್ದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ‌’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.